ಬೆಂಗಳೂರು, ಆಗಸ್ಟ್ 01: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಐಟಿ ಕಾರಿಡಾರ್ ಸಂಪರ್ಕಿಸುವ 19.15-ಕಿಮೀ ಆರ್ವಿ ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗ (Namma Metro Yellow line) ಹಾಗೂ ಎಲ್ಲ ನಿಲ್ದಾಣಗಳ ತಪಾಸಣೆ ಪೂರ್ಣಗೊಂಡಿದೆ. ಹಳದಿ ಮಾರ್ಗಕ್ಕೆ ಶಾಸನಬದ್ಧ ಸುರಕ್ಷತಾ ಅನುಮತಿಯನ್ನು ದೊರಕಿದೆ. ಇದೇ ಆಗಸ್ಟ್ 15ರಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಈ ನೂತನ ಮಾರ್ಗ ಉದ್ಘಾಟಿಸಲು ಪ್ಲಾನ್ ಮಾಡಿಕೊಂಡಿದೆ.
ಬೆಂಗಳೂರು ಮೆಟ್ರೋ ಹಳದಿ ಮಾರ್ಗವನ್ನು ಜುಲೈ 22ರಿಂದ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಪಾಸಣೆ ಮಾಡಿದ್ದರು. ಸುಮಾರು ನಾಲ್ಕು ದಿನಗಳ ಕಾಲ ತಪಾಸಣೆ ನಡೆಸಲಾಗಿತ್ತು. ಬೆಂಗಳೂರು ಪ್ರಯಾಣಿಕರಿಗೆ ಈ ಆರ್ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದ ಕಾರ್ಯಾಚರಣೆ ನಿರ್ಣಾಯಕವಾಗಿದೆ. ಸತತ ಮೂರು ವರ್ಷಗಳ ವಿಳಂಬ ಬಳಿಕ ಮೆಟ್ರೋ ಸಂಚಾರಕ್ಕೆ ಈ ಮಾರ್ಗವು ಪರಿಶೀಲನೆ ಮುಗಿಸಿ ವಾಣಿಜ್ಯ ಸಂಚಾರದ ಅನುಮತಿ ಸಹ ಪಡೆದಿದೆ.
ಆ. 15 ಹಳದಿ ಮಾರ್ಗ ಲೋಕಾರ್ಪಣೆ ಸಾಧ್ಯತೆ
ಇತ್ತೀಚೆಗೆ ಸಂಸದ ತೇಜಸ್ವಿ ಸೂರ್ಯ ಅವರು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. ಹಳದಿ ಮಾರ್ಗ ಕಾರ್ಯಾಚರಣೆಗೆ ಅನುಕೂಲವಾಗುವಂತೆ ತಪಾಸಣೆ ಆಯುಕ್ತರಿಂದ ತ್ವರಿತ ವರದಿ ನೀಡುವಂತೆ, ಅನುಮೋದನೆ ಕೊಡಿಸುವಂತೆ ಒತ್ತಾಯಿಸಿದ್ದರು.
ಈ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡುವ ಸಾಧ್ಯತೆ ಇದೆ. ಈ ಮೊದಲು ಆಗಸ್ಟ್ 15ರಂದು ಮಾರ್ಗ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಸದ್ಯದ ಪರಿಸ್ಥಿತಿ ನೋಡಿದರೆ ಅದೇ ದಿನ ಹೊಸ ಮಾರ್ಗದಲ್ಲಿ ಸೇವೆ ಆರಂಭವಾಗುವ ಲಕ್ಷಣಗಳು ದಟ್ಟವಾಗಿವೆ.
ಪ್ರಯಾಣಿಕರ ಕಾಯುವಿಕೆ ಅಂತ್ಯ ಪ್ರತಿ 20ನಿಮಿಷಕ್ಕೆ ಒಂದರಂತೆ ಈಗಿರುವ ಮೂರು ರೈಲುಗಳು ಓಡಾಡಲಿವೆ. ನಂತರ ನಾಲ್ಕನೇ ರೈಲು ಸೆಪ್ಟಂಬರ್ನಿಂದ ಸಂಚಾರ ಆರಂಭಿಸಬಹುದು ಎಂದು BMRCL ಮೂಲಗಳು ತಿಳಿಸಿವೆ. ಕಳೆದ ಮಂಗಳವಾರ ಮತ್ತು ಬುಧವಾರ ಪಶ್ಚಿಮ ಬಂಗಾಳದ ಟಿಟಾಗಢ ನಿಂದ ಡ್ರೈವರ್ಲೆಸ್ 4ನೇ ರೈಲು ಪೂರೈಕೆಗೆ ಚಾಲನೆ ನೀಡಲಾಗಿದೆ. ಬೋಗಿಗಳನ್ನು ಹೊತ್ತ ರೈಲು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆ. ಬೆಂಗಳೂರಿಗರ ನಿರಂತರ ಕಾಯುವಿಕೆ ಕೊನೆಯಾಗುವ ದಿನಗಳು ಹತ್ತಿರವಾಗಿವೆ.




