
ಟೆಕ್ ಸಮಾಚಾರ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ತನ್ನ ಅತ್ಯಂತ ಬಲಿಷ್ಠ ರಾಕೆಟ್ ಎನಿಸಿಕೊಂಡಿರುವ LVM3 ಮೂಲಕ ಬೃಹತ್ ಸಂವಹನ ಉಪಗ್ರಹ ‘ಬ್ಲೂಬರ್ಡ್ ಬ್ಲಾಕ್-2’ ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
ಈ ಅತ್ಯಾಧುನಿಕ ಉಪಗ್ರಹವು ಬಾಹ್ಯಾಕಾಶದಿಂದ ನೇರವಾಗಿ ಮೊಬೈಲ್ ಫೋನ್‌ಗಳಿಗೆ ಹೈ-ಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ನೀಡುವ ಸಾಮರ್ಥ್ಯ ಹೊಂದಿದ್ದು, ಇದು ಭಾರತದ ದೂರಸಂಪರ್ಕ ಮತ್ತು ಇಂಟರ್ನೆಟ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಲಿದೆ.
ವಿಶೇಷವಾಗಿ ಮೊಬೈಲ್ ಟವರ್‌ಗಳಿಲ್ಲದ ದೇಶದ ಕುಗ್ರಾಮಗಳು, ಮಲೆನಾಡು ಮತ್ತು ಕರಾವಳಿ ಪ್ರದೇಶಗಳಿಗೆ ತಡೆರಹಿತ 5G ಸಂಪರ್ಕವನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.ಈ ಯಶಸ್ವಿ ಉಡಾವಣೆಯು ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಭಾರತದ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಸತತ ಯಶಸ್ಸಿನ ಮೂಲಕ LVM3 ರಾಕೆಟ್ ಭಾರಿ ತೂಕದ ಉಪಗ್ರಹಗಳನ್ನು ಸುರಕ್ಷಿತವಾಗಿ ಕಕ್ಷೆಗೆ ತಲುಪಿಸುವಲ್ಲಿ ತನ್ನ ದಕ್ಷತೆಯನ್ನು ಮತ್ತೊಮ್ಮೆ ಜಗತ್ತಿಗೆ ಸಾಬೀತುಪಡಿಸಿದೆ. ಈ ಸಾಧನೆಯು ಪ್ರಧಾನಮಂತ್ರಿಗಳ ‘ಡಿಜಿಟಲ್ ಇಂಡಿಯಾ’ ಕನಸಿಗೆ ದೊಡ್ಡ ಬೂಸ್ಟ್ ನೀಡಲಿದ್ದು, ಮುಂಬರುವ ದಿನಗಳಲ್ಲಿ ಸಾಮಾನ್ಯ ಜನರಿಗೂ ಅತ್ಯಂತ ವೇಗದ ಮತ್ತು ಅಗ್ಗದ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಲಭ್ಯವಾಗುವಂತೆ ಮಾಡಲಿದೆ.
ಇಸ್ರೋದ ಈ ಅಮೋಘ ಸಾಧನೆಯನ್ನು ದೇಶದಾದ್ಯಂತ ವಿಜ್ಞಾನಿಗಳು ಮತ್ತು ತಂತ್ರಜ್ಞಾನ ಪ್ರೇಮಿಗಳು ಸಂಭ್ರಮದಿಂದ ಸ್ವಾಗತಿಸಿದ್ದಾರೆ.



