Business

ಅಚ್ಚರಿ ಹುಟ್ಟಿಸಿದ ಭಾರತದ ಆರ್ಥಿಕತೆ; 2ನೇ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 8.2 ಬೆಳವಣಿಗೆ

India GDP grows 8.2pc in Q2 of FY26: ಈ ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಶೇ. 7.8ರಷ್ಟು ಹೆಚ್ಚಿ ಅಚ್ಚರಿ ಹುಟ್ಟಿಸಿದ್ದ ಭಾರತದ ಆರ್ಥಿಕತೆ ಎರಡನೇ ಕ್ವಾರ್ಟರ್​ನಲ್ಲಿ ಇನ್ನೂ ಹೆಚ್ಚು ಅಚ್ಚರಿ ತಂದಿದೆ. ಜುಲೈನಿಂದ ಸೆಪ್ಟೆಂಬರ್​ವರೆಗಿನ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 8.2ರಷ್ಟು ಬೆಳೆದಿದೆ. ಹೆಚ್ಚಿನ ಆರ್ಥಿಕ ತಜ್ಞರು ಶೇ. 7ರಿಂದ ಶೇ. 7.50ರ ಶ್ರೇಣಿಯಲ್ಲಿ ಬೆಳೆಯಬಹುದು ಎಂದು ನಿರೀಕ್ಷಿಸಿದ್ದರು

ನವದೆಹಲಿ, ನವೆಂಬರ್ 28: ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್​ನಲ್ಲಿ ಜಿಡಿಪಿ (GDP) ನಿರೀಕ್ಷೆಮೀರಿ ಭರ್ಜರಿಯಾಗಿ ಬೆಳೆದಿದೆ. ಜುಲೈನಿಂದ ಸೆಪ್ಟೆಂಬರ್​ವರೆಗಿನ ಅವಧಿಯಲ್ಲಿ ಆರ್ಥಿಕತೆ ಶೇ. 8.2ರಷ್ಟು ಹೆಚ್ಚಿದೆ ಎಂದು ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶದಿಂದ ತಿಳಿದುಬರುತ್ತದೆ. ಈ ತ್ರೈಮಾಸಿಕದಲ್ಲಿ ಆರ್ಥಿಕತೆ ಈ ಪರಿ ಬೆಳೆಯುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಹೆಚ್ಚಿನ ಆರ್ಥಿಕ ತಜ್ಞರು ಮಾಡಿದ ಅಂದಾಜು ಶೇ. 7ರಿಂದ ಶೇ. 7.5ರ ಶ್ರೇಣಿಯಲ್ಲಿತ್ತು. ಮೊದಲ ಕ್ವಾರ್ಟರ್​ನಲ್ಲಿ ಬೆಳೆದ ಶೇ. 7.8ರ ದರವನ್ನೂ ಮೀರಿಸಿದ ಎರಡನೇ ಕ್ವಾರ್ಟರ್​ನ ಬೆಳವಣಿಗೆ.

ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, 2024-25ರ ಎರಡನೇ ಕ್ವಾರ್ಟರ್​ನಲ್ಲಿ ಭಾರತದ ರಿಯಲ್ ಜಿಡಿಪಿ 44.94 ಲಕ್ಷ ಕೋಟಿ ರೂ ಇತ್ತು. ಈ ವರ್ಷದ ಎರಡನೇ ಕ್ವಾರ್ಟರ್​ನಲ್ಲಿ ಇದು 48.63 ಲಕ್ಷ ಕೋಟಿ ರೂಗೆ ಏರಿದೆ. ಹಿಂದಿನ ವರ್ಷದ ಕ್ವಾರ್ಟರ್​ಗೆ ಹೋಲಿಸಿದರೆ ಆರ್ಥಿಕತೆ ಶೇ. 8.2ರಷ್ಟು ಬೆಳೆದಂತಾಗಿದೆ.

ನಿವ್ವಳ ಉತ್ಪನ್ನ ತೆರಿಗೆಗಳನ್ನು ಜಿಡಿಪಿಯಿಂದ ಕಳೆದರೆ ಉಳಿಯುವ ರಿಯಲ್ ಜಿವಿಎ 2025-26ರ 2ನೇ ಕ್ವಾರ್ಟರ್​ನಲ್ಲಿ 44.77 ಲಕ್ಷ ಕೋಟಿ ರೂ ಇದೆ. ಹಿಂದಿನ ವರ್ಷದ ಇದೇ ಕ್ವಾರ್ಟರ್​ಗೆ ಹೋಲಿಸಿದರೆ ರಿಯಲ್ ಜಿವಿಎನಲ್ಲಿ ಶೇ. 8.1ರಷ್ಟು ಹೆಚ್ಚಾಗಿದೆ.

ದತ್ತಾಂಶದ ಪ್ರಕಾರ, ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಶೇ. 9.1ರಷ್ಟು ಬೆಳೆದಿದೆ. ಈ ಉತ್ಪಾದನಾ ವಲಯದ ಬೆಳವಣಿಗೆ ತುಸು ಅನಿರೀಕ್ಷಿತವೆನಿಸಿದೆ. ಭಾರತದ ಈ ಕ್ವಾರ್ಟರ್​ನ ಜಿಡಿಪಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಹಣಕಾಸು, ರಿಯಲ್ ಎಸ್ಟೇಟ್, ವೃತ್ತಿಪರ ಸೇವೆಗಳ ಉತ್ಪಾದನೆ ಶೇ. 10.2ರಷ್ಟು ಬೆಳೆದಿದೆ. ಕೃಷಿ ವಲಯ ಶೇ. 3.5ರಷ್ಟು ಸಾಧಾರಣ ಬೆಳವಣಿಗೆ ಕಂಡಿದೆ. ವಿದ್ಯುತ್, ಗ್ಯಾಸ್, ನೀರು ಸರಬರಾಜು ಮೊದಲಾದ ನಾಗರಿಕ ಸೇವೆಗಳ ಸೆಕ್ಟರ್ ಕೂಡ ಶೇ. 4.4ರ ಸಾಧಾರಣ ಬೆಳವಣಿಗೆ ಕಂಡಿದೆ.

2047ರ ವೇಳೆಗೆ ಭಾರತವನ್ನು ವಿಕಸಿತ ದೇಶವನ್ನಾಗಿ ಮಾಡಬೇಕೆನ್ನುವ ಸಂಕಲ್ಪ ಕೇಂದ್ರ ಸರ್ಕಾರದ್ದಾಗಿದೆ. ಈ ಹಂತಕ್ಕೆ ಭಾರತ ಹೋಗಬೇಕೆಂದರೆ ಮುಂದಿನ 22 ವರ್ಷ ಆರ್ಥಿಕತೆಯು ಶೇ. 7.8ರ ಸರಾಸರಿ ದರದಲ್ಲಿ ಬೆಳೆಯಬೇಕು ಎಂದು ವಿಶ್ವಬ್ಯಾಂಕ್ ಹೇಳುತ್ತದೆ. ಕಳೆದ ವರ್ಷದ ಆರ್ಥಿಕ ಸಮೀಕ್ಷೆಯಲ್ಲೂ (2024-25) ಇದೇ ಅಂದಾಜು ಮಾಡಲಾಗಿತ್ತು. ಎರಡು ದಶಕಗಳ ಕಾಲ ಶೇ. 8ರ ಸರಾಸರಿ ವೇಗದಲ್ಲಿ ಆರ್ಥಿಕತೆ ಬೆಳೆದರೆ 2047ಕ್ಕೆ ಭಾರತ ವಿಕಸಿತ ದೇಶವಾಗಲು ಸಾಧ್ಯ ಎಂದು ಅಭಿಪ್ರಾಯಪಡಲಾಗಿದೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft