Sports

ವಿಶ್ವಕಪ್ ಗೆದ್ದ ಹೆಣ್ಣು ಮಕ್ಕಳಿಗೆ ಸಿಗುತ್ತಿರುವ ಸಂಬಳವೆಷ್ಟು? ಪುರುಷರ ತಂಡಕ್ಕಿಂತ ಇಷ್ಟು ದೊಡ್ಡ ವ್ಯತ್ಯಾಸ

India Womens Team Salary- ಭಾರತದ ಮಹಿಳಾ ತಂಡ ವಿಶ್ವಕಪ್ ಗೆದ್ದ ಮೇಲೆ ಐಸಿಸಿ-ಬಿಸಿಸಿಐಗಳಿಂದ ಭಾರೀ ಮೊತ್ತವೇ ಸಿಕ್ಕಿದೆ. ಪ್ರಾಯೋಜಕತ್ವಕ್ಕಾಗಿ ಕಂಪನಿಗಳೂ ಮುಗಿ ಬೀಳುತ್ತಿವೆ. ಆದರೆ ಪ್ರಸ್ತುತ ಮಹಿಳಾ ತಂಡದ ಆಟಗಾರ್ತಿಯರಿಗೆ ಸಿಗುತ್ತಿರುವ ವೇತನ ಎಷ್ಟು? ಬಿಸಿಸಿಐನ ವಾರ್ಷಿಕ ಒಪ್ಪಂದಗಳು ಯಾವ ರೀತಿ ಇದೆ? ಪುರುಷರಿಗೂ ಮಹಿಳೆಯರಿಗೂ ಸಿಗುತ್ತಿರುವ ವೇತನದಲ್ಲಿ ಇಷ್ಟು ದೊಡ್ಡ ವ್ಯತ್ಯಾಸವೇ! ಇಲ್ಲಿದೆ ನೋಡಿ ಸಂಪೂರ್ಣ ವಿವರ. ಈ ವಿಶ್ವಕಪ್ ಗೆಲುವಿನ ಬಳಿಕ ಏನಾದರೂ ಬದಲಾವಣೆಗಳು ನಡೆಯಬಹುದೇ?

ಹೈಲೈಟ್ಸ್‌

  • ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಭಾರೀ ಬಹುಮಾನಗಳ ಘೋಷಣೆ
  • ಆದರೆ ಮಹಿಳಾ ಮತ್ತು ಪುರುಷ ಆಟಗಾರರ ವಾರ್ಷಿಕ ಒಪ್ಪಂದದಲ್ಲಿ ಅಜಗಜಾಂತರ
  • ಮಹಿಳೆಯ ಎ ಗ್ರೇಡ್ ಒಪ್ಪಂದಕ್ಕಿಂತ ಪುರುಷರ ಸಿ ಗ್ರೇಡ್ ಒಪ್ಪಂದ ಆಟಗಾರರಿಗೆ ಅಧಿಕ ಮೊತ್ತ

ಭಾರತ ಮಹಿಳಾ ಕ್ರಿಕೆಟ್ ತಂಡವು ಭಾನುವಾರದಂದು 2025ರ ಐಸಿಸಿ ಮಹಿಳಾ ವಿಶ್ವಕಪ್ ಅನ್ನು ಗೆಲ್ಲುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಬಹುಕಾಲದ ಕನಸನ್ನು ನನಸಾಗಿಸಿಕೊಂಡಿದ್ದು ನಿಜಕ್ಕೂ ಮಹತ್ವದ ಮೈಲಿಗಲ್ಲು. ಹೀಗಿರುವಾಗ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರರ ಸಂಬಳದ ಬಗ್ಗೆ ಅನೇಕರಿಗೆ ಕುತೂಹಲವಿದೆ.

2022ರ ಅಕ್ಟೋಬರ್‌ನಲ್ಲಿ ಬಿಸಿಸಿಐ ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನವನ್ನು ಘೋಷಿಸಿತ್ತು. ಹಾಗೆಂದು ಪುರುಷ ಮತ್ತು ಮಹಿಳಾ ಆಟಗಾರರ ಸಂಬಳ ಪಡೆಯುತ್ತಿದ್ದಾರೆ ಎಂದರ್ಥ ಅಲ್ಲ, ಒಪ್ಪಂದದ ಪಡೆಯುವ ಮೊತ್ತಗಳಲ್ಲಿ ದೊಡ್ಡ ವ್ಯತ್ಯಾಸವೇ ಇದೆ. ಬಿಡಿಯಾಗಿ ನೋಡಿದರೆ ಪುರುಷ ಮತ್ತು ಮಹಿಳಾ ಕ್ರಿಕೆಟಿಗರೆಲ್ಲರೂ ಈಗ ಒಂದು ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂಪಾಯಿ., ಏಕದಿನ ಪಂದ್ಯಕ್ಕೆ (ODI) 6 ಲಕ್ಷ ರೂಪಾಯಿ., ಅಂತಾರಾಷ್ಟ್ರೀಯ ಟಿ20 ಪಂದ್ಯಕ್ಕೆ 3 ಲಕ್ಷ ರೂಗಳನ್ನು ಪಂದ್ಯ ಶುಲ್ಕವಾಗಿ ಪಡೆಯುತ್ತಾರೆ. ಮಹಿಳಾ ಕ್ರಿಕೆಟ್ ಗೆ ಹೋಲಿಸಿದರೆ ಪುರುಷ ಆಟಗಾರರರು ಹೆಚ್ಚು ಪಂದ್ಯಗಳನ್ನು ಆಡುತ್ತಾರೆ. ಇದು ಆದಾಯದಲ್ಲಿ ದೊಡ್ಡ ಅಂತರಕ್ಕೆ ಕಾರಣವಾಗಿದೆ. ಅಲ್ಲದೆ, ಬಿಸಿಸಿಐ ವಾರ್ಷಿಕ ಒಪ್ಪಂದಗಳನ್ನು ಪರಿಶೀಲಿಸಿದಲ್ಲಿ ಈ ಒಪ್ಪಂದಗಳಲ್ಲಿ ಮಹಿಳಾ ಆಟಗಾರರು ಪಡೆಯುವ ಮೊತ್ತ ಪುರುಷ ಆಟಗಾರರು ಪಡೆಯುವ ಮೊತ್ತದ ಕೇವಲ ಶೇಕಡಾ 10ರಷ್ಟು ಮಾತ್ರ

ಹೀಗಿದೆ ಬಿಸಿಸಿಐ ವಾರ್ಷಿಕ ಒಪ್ಪಂದ

ಶ್ರೇಣಿ ಪುರುಷರ ತಂಡ ಮಹಿಳೆಯರ ತಂಡ
A+ 7 ಕೋಟಿ ರೂಪಾಯಿ ಅನ್ವಯಿಸುವುದಿಲ್ಲ
A 5 ಕೋಟಿ ರೂಪಾಯಿ 50 ಲಕ್ಷ ರೂಪಾಯಿ
B 3 ಕೋಟಿ ರೂಪಾಯಿ 30 ಲಕ್ಷ ರೂಪಾಯಿ
C 1 ಕೋಟಿ ರೂಪಾಯಿ 10 ಲಕ್ಷ ರೂಪಾಯಿ

ಬಿಸಿಸಿಐ ವಾರ್ಷಿಕ ಒಪ್ಪಂದದ ಶ್ರೇಣಿಯ ಪ್ರಕಾರ ಪುರುಷರ ‘ಎ+’ ಶ್ರೇಣಿಯ ಆಟಗಾರರು 7 ಕೋಟಿ ರೂಪಾಯಿ ಗಳಿಸಿದರೆ, ಈ ಶ್ರೇಣಿ ಮಹಿಳಾ ಆಟಗಾರ್ತಿಯರಿಗೆ ಅನ್ವಯಿಸುವುದಿಲ್ಲ. ಪುರುಷರ ‘ಎ’ ಶ್ರೇಣಿಯ ಆಟಗಾರರು 5 ಕೋಟಿ ರೂಪಾಯಿ ಗಳಿಸಿದರೆ, ಮಹಿಳೆಯರ ‘ಎ’ ಶ್ರೇಣಿಯ ಆಟಗಾರರು 50 ಲಕ್ಷ ರೂರಪಾಯಿ ಗಳಿಸುತ್ತಾರೆ. ಪುರುಷರ ‘ಬಿ’ ಶ್ರೇಣಿಯ ಆಟಗಾರರು 3 ಕೋಟಿ ರೂಪಾಯಿ ಗಳಿಸಿದರೆ, ಮಹಿಳೆಯರ ‘ಬಿ’ ಶ್ರೇಣಿಯ ಆಟಗಾರರು 30 ಲಕ್ಷ ರೂಪಾಯಿ ಗಳಿಸುತ್ತಾರೆ. ಪುರುಷರ ‘ಸಿ’ ಶ್ರೇಣಿಯ ಆಟಗಾರರು 1 ಕೋಟಿ ರೂಪಾಯಿ ಗಳಿಸಿದರೆ, ಮಹಿಳೆಯರ ‘ಸಿ’ ಶ್ರೇಣಿಯ ಆಟಗಾರರು 10 ಲಕ್ಷ ರೂಪಾಯಿ ಗಳಿಸುತ್ತಾರೆ. ಅಂದರೆ ಪುರುಷರ ಸಿ ಶ್ರೇಣಿಯ ಮೊತ್ತ ಸಹ ಮಹಿಳೆಯರ ಎ ಶ್ರೇಣಿಯ ಆಟಗಾರರಿಗೆ ಸಿಗುವುದಕ್ಕಿಂತ ದುಪ್ಪಟ್ಟು.

ಗುತ್ತಿಗೆ ಒಪ್ಪಂದ ನವೀಕರಣವಾಗುತ್ತಾ?

ಇದೀಗ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಐಸಿಸಿಯಿಂದ ಬಹುಮಾನದ ಮೊತ್ತವಾಗಿ ಸುಮಾರು 39 ಕೋಟಿ ರೂಪಾಯಿ ಲಭಿಸಿದೆ. ಇದು ಐಸಿಸಿ ಟೂರ್ನಿಯ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತವಾಗಿದೆ. ಇನ್ನು ಹರ್ಮನ್ ಪ್ರೀತ್ ಕೌರ್ ಬಳಗಕ್ಕೆ ಬಿಸಿಸಿಐಯು ಸಹ 51 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಜೊತೆಗೆ ಮಹಿಳಾ ಆಟಗಾರ್ತಿಯರ ಬ್ರಾಂಡ್ ವ್ಯಾಲ್ಯೂ ಸಹ ಗಣನೀಯ ಪ್ರಮಾಣದಲ್ಲಿ ಏರಿದೆ. ಹೀಗಾಗಿ ಈ ವಿಶ್ವಕಪ್ ಗೆಲುವು ಕೇವಲ ಪ್ರಶಸ್ತಿ ಗೆಲುವಲ್ಲ, ಇದು ಭಾರತದಲ್ಲಿ ಮಹಿಳಾ ಕ್ರಿಕೆಟ್‌ನ ಭವಿಷ್ಯಕ್ಕೆ ಒಂದು ಹೊಸ ದಾರಿಯನ್ನು ತೆರೆದಿದೆ ಎಂದು ಹೇಳಿದರೂ ತಪ್ಪಲ್ಲ. ಈ ಹೊತ್ತಿನಲ್ಲಾದರೂ ಬಿಸಿಸಿಐ ಮಹಿಳಾ ಆಟಗಾರ್ತಿಯರ ಗುತ್ತಿಗೆ ಒಪ್ಪಂದವನ್ನು ನವೀಕರಿಸುತ್ತದಾ ಎಂಬ ಬಗ್ಗೆ ಕುತೂಹಲ ಇದ್ದೇ ಇದೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft