Business News

ಅನಿಲ್ ಅಂಬಾನಿಗೆ ಮುಂದುವರಿದ ಇಡಿ ಕಂಟಕ; ಮತ್ತೆ ಸಮನ್ಸ್ ನೀಡಿದ ಈಡಿ

ರಿಲಾಯನ್ಸ್ ಗ್ರೂಪ್ ಮುಖ್ಯಸ್ಥ ಅನಿಲ್ ಅಂಬಾನಿ ಅವರಿಗೆ ಇಡಿ ಕಂಟಕ ಮುಂದುವರಿದಿದೆ. ಫೆಮಾ ಕಾಯ್ದೆ ಅಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಈ ಸಮನ್ಸ್ ಕೊಟ್ಟಿರುವುದು ತಿಳಿದುಬಂದಿದೆ. ರಿಲಾಯನ್ಸ್ ಇನ್​ಫ್ರಾಸ್ಟ್ರಕ್ಚರ್​ಗೆ ಕೊಡಲಾಗಿದ್ದ ರಸ್ತೆ ನಿರ್ಮಾಣ ಗುತ್ತಿಗೆಯನ್ನು ಅಕ್ರಮವಾಗಿ ಬೇರೆ ಸಂಸ್ಥೆಗೆ ಉಪಗುತ್ತಿಗೆ ಕೊಡಲಾಗಿದೆ ಎಂಬುದು ತನಿಖಾ ಸಂಸ್ಥೆಗಳ ಆರೋಪ.

ನವದೆಹಲಿ, ನವೆಂಬರ್ 6: ಉದ್ಯಮಿ ಅನಿಲ್ ಅಂಬಾನಿ (Anil Ambani) ಅವರಿಗೆ ಜಾರಿ ನಿರ್ದೇಶನಾಲಯದಿಂದ ಮತ್ತೊಮ್ಮೆ ಸಮನ್ಸ್ ಕೊಡಲಾಗಿದೆ. ಫೆಮಾ ಅಡಿಗೆ ಬರುವ ಪ್ರಕರಣವೊಂದರ ತನಿಖೆ ನಡೆಯುತ್ತಿದ್ದು, ಈ ಸಂಬಂಧ, ನವೆಂಬರ್ 14ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಅಂಬಾನಿಗೆ ಸಮನ್ಸ್ ಕೊಡಲಾಗಿದೆ. ಮುಕೇಶ್ ಅಂಬಾನಿ ಅವರ ಕಿರಿಯ ಸಹೋದರ ಅನಿಲ್ ಅಂಬಾನಿ ಹಾಗೂ ಅವರ ರಿಲಾಯನ್ಸ್ ಗ್ರೂಪ್​ನ ವಿರುದ್ಧ ವಿದೇಶ ವಿನಿಮಯ ನಿರ್ವಹಣಾ ಕಾಯ್ದೆ (FEMA- Foreign Exchange Management Act) ಹಾಗೂ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್​ಎ) ಅಡಿ ಪ್ರಕರಣಗಳನ್ನು ದಾಖಲಿಸಿಕೊಂಡು ಇಡಿ ತನಿಖೆ ನಡೆಸುತ್ತಿದೆ.

ಬ್ಯಾಂಕ್ ಸಾಲಗಳನ್ನು ಅಕ್ರಮವಾಗಿ ವರ್ಗಾಯಿಸಿರುವ ಗಂಭೀರ ಆರೋಪ ಅನಿಲ್ ಅಂಬಾನಿ ಹಾಗೂ ಅವರ ಸಂಸ್ಥೆಗಳ ಮೇಲೆ ಇದೆ. ಎಸ್​ಬಿಐ, ಯೆಸ್ ಬ್ಯಾಂಕ್, ಐಡಿಬಿಐ ಮೊದಲಾದ ಬ್ಯಾಂಕುಗಳಿಂದ ಪಡೆದ ಸಾಲವನ್ನು ಉದ್ದೇಶಿತ ಕೆಲಸಗಳಿಗೆ ಬಳಸದೇ ನಕಲಿ ಕಂಪನಿಗಳಿಗೆ ಹಣ ವರ್ಗಾವಣೆ ಮಾಡಿ ವಂಚಿಸಿದ ಆರೋಪಗಳಿವೆ. ಒಟ್ಟು 17,000 ಕೋಟಿ ರೂ ಸಾಲ ವಂಚನೆ ನಡೆದಿದೆ ಎಂದು ತನಿಖಾ ಸಂಸ್ಥೆಗಳು ಆರೋಪಿಸಿವೆ

ಬ್ಯಾಂಕ್ ಸಾಲಗಳ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು ಅನಿಲ್ ಅಂಬಾನಿಗೆ ಸೇರಿದ ಒಟ್ಟು 7,500 ಕೋಟಿ ರೂ ಮೊತ್ತದ ಅಸ್ತಿಪಾಸ್ತಿಗಳನ್ನು ಜಫ್ತಿ ಮಾಡಿದೆ. ಪಿಎಂಎಲ್​ಎ ಕಾಯ್ದೆ ಅಡಿ ಪ್ರಕರಣಗಳು ದಾಖಲಾಗಿವೆ.

ಈಗ ನವೆಂಬರ್ 14ಕ್ಕೆ ವಿಚಾರಣೆಗೆ ಹಾಜರಾಗುವಂತೆ ಅನಿಲ್ ಅಂಬಾನಿಗೆ ಸಮನ್ಸ್ ನೀಡಲಾಗಿರುವುದು ಫೆಮಾ ಅಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತಿದೆ.

ರಿಲಾಯನ್ಸ್ ಇನ್​ಫ್ರಾಸ್ಟ್ರಕ್ಚರ್ ಸಂಸ್ಥೆಯು ತನಗೆ ನೀಡಲಾಗಿದ್ದ ರಸ್ತೆ ನಿರ್ಮಾಣ ಗುತ್ತಿಗೆಯನ್ನು ಬೇರೆ ಸಂಸ್ಥೆಗೆ ಉಪಗುತ್ತಿಗೆ ಕೊಟ್ಟಿತ್ತು. ಇದರಲ್ಲಿ ವಿದೇಶೀ ವಿನಿಮಯ ನಿರ್ವಹಣಾ ಕಾಯ್ದೆಯ ನಿಯಮಗಳನ್ನು ಪಾಲಿಸದೆ ಅಕ್ರಮ ಎಸಗಲಾಗಿದೆ. 38 ಕೋಟಿ ರೂ ಅಕ್ರಮ ನಡೆದಿದೆ ಎಂಬುದು ತನಿಖೆ ವೇಳೆ ಕಂಡು ಬಂದಿದೆ. ಈ ಬಗ್ಗೆ ವಿಚಾರಣೆ ನಡೆಸಲು ಅಂಬಾನಿಗೆ ಸಮನ್ಸ್ ಕೊಡಲಾಗಿರಬಹುದು.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft