GULF News

ಟ್ರಂಪ್ ಆಪ್ತ ವಕೀಲರ ನಿಯೋಜನೆ ಬಳಿಕ ಅದಾನಿ ವಿರುದ್ಧದ ವಂಚನೆ ಆರೋಪ ಕೈಬಿಟ್ಟ ಅಮೆರಿಕ! ದುಡ್ಡಿದ್ರೆ ದುನಿಯಾ..?!

ಬೆಂಗಳೂರು, 15 ಮೇ 2026: ಅಮೆರಿಕಾದಲ್ಲಿ ಭಾರತೀಯ ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸಹವರ್ತಿಗಳ ವಿರುದ್ಧ ದಾಖಲಾಗಿದ್ದ ವಂಚನೆ ಹಾಗೂ ಲಂಚದ ಆರೋಪಗಳ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಸುಮಾರು ೧೮ ತಿಂಗಳ ಸುದೀರ್ಘ ತನಿಖೆಯ ಬಳಿಕ, ಅಮೆರಿಕಾದ ನ್ಯಾಯಾಂಗ ಇಲಾಖೆಯು (DoJ) ಅದಾನಿ ಮೇಲಿನ ಕ್ರಿಮಿನಲ್ ಆರೋಪಗಳನ್ನು ಕೈಬಿಡಲು ಮುಂದಾಗಿದೆ ಎಂದು ವರದಿಯಾಗಿದೆ. ಈ ಬೆಳವಣಿಗೆಯು ಜಾಗತಿಕ ಉದ್ಯಮ ರಂಗದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

​ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕಾದ ಷೇರುಪೇಟೆ ನಿಯಂತ್ರಣ ಆಯೋಗ (SEC) ದಾಖಲಿಸಿದ್ದ ನಾಗರಿಕ ಮೊಕದ್ದಮೆಯನ್ನು ಉಭಯ ಪಕ್ಷಗಳು ಪರಸ್ಪರ ಒಪ್ಪಂದದ ಮೂಲಕ ಇತ್ಯರ್ಥಪಡಿಸಿಕೊಂಡಿವೆ. ನಿಯಮಾವಳಿಗಳ ಅನ್ವಯ ಗೌತಮ್ ಅದಾನಿ ಅವರು $೬ ಮಿಲಿಯನ್ ಹಾಗೂ ಸಾಗರ್ ಅದಾನಿ ಅವರು $೧೨ ಮಿಲಿಯನ್ ದಂಡ ಪಾವತಿಸಲು ಸಮ್ಮತಿಸಿದ್ದಾರೆ. ಆದರೆ, ತಾವು ಯಾವುದೇ ತಪ್ಪು ಎಸಗಿಲ್ಲ ಎಂಬ ನಿಲುವಿಗೆ ಉದ್ಯಮಿಗಳು ಬದ್ಧರಾಗಿದ್ದು, ಆರೋಪಗಳನ್ನು ಒಪ್ಪಿಕೊಳ್ಳದೆಯೇ ಈ ದಂಡದ ಮೊತ್ತವನ್ನು ಪಾವತಿಸುತ್ತಿದ್ದಾರೆ.

​ಈ ಕಾನೂನು ಹೋರಾಟದ ಯಶಸ್ಸಿನ ಹಿಂದೆ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ವಕೀಲರಾದ ರಾಬರ್ಟ್ ಜಿಯುಫ್ರಾ ಅವರ ಕಾರ್ಯತಂತ್ರ ಪ್ರಮುಖ ಪಾತ್ರ ವಹಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅದಾನಿ ಪರವಾಗಿ ವಾದ ಮಂಡಿಸಿದ ವಕೀಲರು, ಅಮೆರಿಕಾದ ನ್ಯಾಯಾಲಯಗಳಿಗೆ ಈ ಪ್ರಕರಣದಲ್ಲಿ ನೇರ ನ್ಯಾಯವ್ಯಾಪ್ತಿ ಇಲ್ಲ ಮತ್ತು ಆರೋಪಗಳಿಗೆ ಪೂರಕವಾದ ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ಪ್ರಬಲವಾಗಿ ಪ್ರತಿಪಾದಿಸಿದ್ದರು.

​ಇದರ ಬೆನ್ನಲ್ಲೇ, ಅಮೆರಿಕಾದಲ್ಲಿ ಬೃಹತ್ ಆರ್ಥಿಕ ಹೂಡಿಕೆ ಮಾಡುವ ಭರವಸೆಯನ್ನೂ ಅದಾನಿ ಸಮೂಹ ನೀಡಿದೆ ಎನ್ನಲಾಗಿದೆ. ಒಂದು ವೇಳೆ ಈ ಪ್ರಕರಣ ಇತ್ಯರ್ಥಗೊಂಡರೆ ಅಮೆರಿಕಾದ ಆರ್ಥಿಕತೆಯಲ್ಲಿ ಸುಮಾರು $೧೦ ಬಿಲಿಯನ್ ಹೂಡಿಕೆ ಮಾಡುವುದಾಗಿ ಮತ್ತು ಆ ಮೂಲಕ ಸುಮಾರು ೧೫,೦೦೦ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಲಾಗಿದ್ದು, ಇದು ಅಮೆರಿಕದ ಅಧಿಕಾರಿಗಳ ನಿರ್ಧಾರದ ಮೇಲೆ ಪ್ರಭಾವ ಬೀರಿದೆ ಎಂದು ಮೂಲಗಳು ತಿಳಿಸಿವೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft