
ಚಾಮರಾಜನಗರ, ಜನವರಿ 24: ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ನಿವಾಸಿ ಪ್ರವೀಣ್ (30) ಎಂಬ ಭಕ್ತನು ಕಳೆದ ಬುಧವಾರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದಾಗ ತಾಳುಬೆಟ್ಟದ ರಂಗಸ್ವಾಮಿ ಒಡ್ಡು ಬಳಿ ಚಿರತೆ ದಾಳಿ ನಡೆಸಿತ್ತು. ಸರಿಸುಮಾರು 100 ಭಕ್ತರಿದ್ದ ಗುಂಪಿನ ನಡುವೆಯೇ ಹಠಾತ್ತನೆ ದಾಳಿ ಮಾಡಿದ ಚಿರತೆಯು ಪ್ರವೀಣ್ ಅವರನ್ನು ಕಾಡಿನೊಳಗೆ ಎಳೆದೊಯ್ದು ಕತ್ತು ಸೀಳಿ ಕೊಂದು ಹಾಕಿತ್ತು. ಈ ಭೀಕರ ಘಟನೆಯಿಂದ ಇಡೀ ರಾಜ್ಯದಾದ್ಯಂತ ಮತ್ತು ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ಬರುವ ಭಕ್ತರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆಯು ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿ, ಮೈಸೂರಿನ ಚಿರತೆ ಕಾರ್ಯಪಡೆ ಮತ್ತು ಪಶುವೈದ್ಯರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ಆರಂಭಿಸಿತು. ಚಿರತೆಯ ಚಲನವಲನಗಳನ್ನು ಪತ್ತೆಹಚ್ಚಲು ಡ್ರೋನ್ ಕ್ಯಾಮೆರಾಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಅಲ್ಲದೆ, ದಾಳಿ ನಡೆದ ಸ್ಥಳದ ಸುತ್ತಮುತ್ತ ಎರಡು ಬೋನುಗಳನ್ನು ಇರಿಸಲಾಗಿತ್ತು.
ಕಾರ್ಯಾಚರಣೆಯ ಭಾಗವಾಗಿ ಗುರುವಾರ ರಾತ್ರಿ ಸುಮಾರು 8:30ರ ಸಮಯದಲ್ಲಿ ರಂಗಸ್ವಾಮಿ ಒಡ್ಡು ಬಳಿಯೇ ಚಿರತೆಯು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅರಿವಳಿಕೆ ಮದ್ದನ್ನು ಪ್ರಯೋಗಿಸಿ ಅದನ್ನು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ. ಸೆರೆಸಿಕ್ಕ ಚಿರತೆಯು ಅಂದಾಜು 5 ವರ್ಷದ ಗಂಡು ಚಿರತೆಯಾಗಿದ್ದು, ಅದರ ಮೈಮೇಲಿರುವ ಗುರುತುಗಳನ್ನು ಪರಿಶೀಲಿಸಿದ ನಂತರ ಇದು ಪ್ರವೀಣ್ ಮೇಲೆ ದಾಳಿ ಮಾಡಿದ ಅದೇ ಚಿರತೆ ಎಂದು ಹುಲಿ ಸಂರಕ್ಷಣಾ ಘಟಕದ ತಜ್ಞರು ದೃಢಪಡಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಚಾಮರಾಜನಗರ ಜಿಲ್ಲಾಡಳಿತವು ತಾಳುಬೆಟ್ಟದಿಂದ ಬೆಟ್ಟದವರೆಗೆ ಪಾದಯಾತ್ರೆ ಮತ್ತು ದ್ವಿಚಕ್ರ ವಾಹನಗಳ ಸಂಚಾರವನ್ನು ಇಂದು ಅಂದರೆ ಜನವರಿ 24ರವರೆಗೆ ತಾತ್ಕಾಲಿಕವಾಗಿ ನಿಷೇಧಿಸಿತ್ತು. ಪ್ರಸ್ತುತ ಸೆರೆಹಿಡಿಯಲಾದ ಚಿರತೆಯನ್ನು ಮೈಸೂರಿನ ಕೂರ್ಗಳ್ಳಿಯಲ್ಲಿರುವ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಭಕ್ತರು ಅರಣ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಿ ಸುರಕ್ಷಿತವಾಗಿ ಪ್ರಯಾಣಿಸಲು ಜಿಲ್ಲಾಡಳಿತ ಮನವಿ ಮಾಡಿದೆ.



