News

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಡಿಕೆಶಿ, ಇನಾಯತ್ ಅಲಿಗೆ ಬಿಗ್ ರಿಲೀಫ್

ಇ.ಡಿ ಜಾರ್ಜ್ ಶೀಟ್ ಪರಿಗಣಿಸಲು ಕೋರ್ಟ್ ನಕಾರ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿರುವ ಹಣ ವರ್ಗಾವಣೆ ಆರೋಪಪಟ್ಟಿಯನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ಮಂಗಳವಾರ ನಿರಾಕರಿಸಿದೆ. ಚಾರ್ಜ್‌ಶೀಟ್‌ಅನ್ನು ತಿರಸ್ಕರಿಸಿದೆ.

ಪ್ರಕರಣದ ವಿಚಾರಣೆ ನಡೆಸಿರುವ ರೂಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ (ಪಿಸಿ ಕಾಯ್ದೆ) ವಿಶಾಲ್ ಗೋಗ್ನೆ, “ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿಇಡಿ ಸಲ್ಲಿಸಿದ ದೂರು ಸಮರ್ಥನೀಯವಲ್ಲ. ಈ ಪ್ರಕರಣದ ತನಿಖೆಯು ಯಾವುದೇ ಎಫ್‌ಐಆರ್‌ಅನ್ನು ಆಧರಿಸಿಲ್ಲ. ಬದಲಾಗಿ, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಖಾಸಗಿ ದೂರನ್ನು ಆಧರಿಸಿದೆ” ಎಂದು ಹೇಳಿದ್ದಾರೆ.

“ಪ್ರಕರಣದ ತನಿಖೆ ಮತ್ತು ಚಾರ್ಜ್‌ಶೀಟ್‌ಅನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಖಾಸಗಿ ದೂರು ಮತ್ತು ಮ್ಯಾಜಿಸ್ಟ್ರೇಟ್ ಅವರ ಸಮನ್ಸ್ ಆದೇಶಗಳಿಂದ ಸಿದ್ದಪಡಿಸಲಾಗಿದೆಯೇ ಹೊರತು ಎಫ್‌ಐಆರ್‌ನಿಂದಲ್ಲ.ಆದ್ದರಿಂದ, ಈ ಚಾರ್ಜ್‌ಶೀಟ್‌ಅನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ” ಎಂದು ಕೋರ್ಟ್‌ ಹೇಳಿದೆ.

ಪ್ರಕರಣದಲ್ಲಿ ಗಾಂಧಿ ಕುಟುಂಬದವರಲ್ಲದೆ, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ, ಯಂಗ್ ಇಂಡಿಯನ್, ಡಾಟೆಕ್ಸ್ ಮರ್ಚಂಡೈಸ್ ಹಾಗೂ ಸುನಿಲ್ ಭಂಡಾರಿ ಅವರನ್ನು ಸಹ ಜಾರಿ ನಿರ್ದೇಶನಾಲಯವು ಆರೋಪಿಗಳನ್ನಾಗಿ ಮಾಡಿದೆ.

ಸೋಮವಾರ ನಡೆದ ವಿಚಾರಣೆಯಲ್ಲಿ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಇತರ ಆರೋಪಿಗಳು ಈ ಹಂತದಲ್ಲಿ ಎಫ್‌ಐಆರ್‌ ಪ್ರತಿಯನ್ನು ಪಡೆಯಲು ಅರ್ಹರಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತು. ಆದಾಗ್ಯೂ, ಮಂಗಳವಾರ, ಇಡಿ ಸಲ್ಲಿಸಿದ ಚಾರ್ಜ್‌ಶೀಟ್‌ಅನ್ನು ಪರಿಗಣಿಸಲು ನ್ಯಾಯಾಲಯವು ನಿರಾಕರಿಸಿದೆ.

ಇನ್ನು, ಕಾಂಗ್ರೆಸ್‌ ನಾಯಕರ ವಿರುದ್ಧದ ಎಫ್‌ಐಆರ್‌ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, “ಬಿಜೆಪಿ ತನ್ನ ಉನ್ನತ ನಾಯಕತ್ವದ ವಿರುದ್ಧ ಕಿರುಕುಳ, ಬೆದರಿಕೆ ಮತ್ತು ಸೇಡಿನ ರಾಜಕೀಯ ಮಾಡುತ್ತಿದೆ. ಮೋದಿ-ಶಾ ಜೋಡಿಯು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣವು ‘ಸಂಪೂರ್ಣ ನಕಲಿ’ ಪ್ರಕರಣವಾಗಿದೆ. ಅಂತಿಮವಾಗಿ ನ್ಯಾಯವು ಗೆಲ್ಲುತ್ತದೆ” ಎಂದು ಪ್ರತಿಪಾದಿಸಿದೆ.

ಕಾಂಗ್ರೆಸ್‌ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, “ಖಾಸಗಿ ದೂರು ದಾಖಲಾದಾಗ ಪ್ರಧಾನಿ ನರೇಂದ್ರ ಮೋದಿ ಅಧಿಕಾರದಲ್ಲಿ ಇರಲಿಲ್ಲ. ಈ ಪ್ರಕರಣವು 2008ಕ್ಕೂ ಹಿಂದಿನದ್ದು. ಕಾಂಗ್ರೆಸ್ ಸುಳ್ಳು ಮತ್ತು ಆಧಾರರಹಿತ ಆರೋಪ ಮಾಡುತ್ತಿದೆ. ಕಾನೂನು ತನ್ನ ಹಾದಿಯಲ್ಲಿ ಸಾಗಲಿ” ಎಂದಿದ್ದಾರೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft