ಮಹಿಳೆಯುರು ತಮ್ಮ ಸೌಂದರ್ಯದ ಬಗ್ಗೆ ತುಂಬಾನೇ ಕಾಳಜಿಯನ್ನು ಹೊಂದಿರುತ್ತಾರೆ. ಅದಕ್ಕಾಗಿ ದುಬಾರಿ ಬೆಲೆಯ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತಾರೆ. ಇದರ ಹೊರತಾಗಿಯೂ ನೀವು ಬೆಳಗ್ಗೆ ಎದ್ದ ನಂತರ ಈ ಕೆಲವು ಸರಳ ಅಭ್ಯಾಸಗಳನ್ನು ನಿಯಮಿತವಾಗಿ ಪಾಲಿಸುವುದರಿಂದಲೂ ನಿಮ್ಮ ತ್ವಚೆಯ ಸೌಂದರ್ಯ ನೈಸರ್ಗಿಕವಾಗಿ ಹೆಚ್ಚಾಗುತ್ತದೆ. ಹಾಗಿದ್ದರೆ ಆ ಅಭ್ಯಾಸಗಳು ಯಾವುದೆಂದು ನೋಡೋಣ.

ಪ್ರತಿಯೊಬ್ಬರೂ ಕೂಡ ನನ್ನ ಸ್ಕಿನ್ ಗ್ಲೋ (glowing skin) ಆಗಿರಬೇಕು, ಮುಖದಲ್ಲಿ ಕಲೆ ಇರಬಾರದು ಎಂದು ಬಯಸುತ್ತಾರೆ. ಅದರಲ್ಲೂ ಮಹಿಳೆಯರು ತಮ್ಮ ತ್ವಚೆಯ ಬಗ್ಗೆ ತುಸು ಹೆಚ್ಚೇ ಕಾಳಜಿಯನ್ನು ವಹಿಸುತ್ತಾರೆ. ಅದಕ್ಕಾಗಿ ದುಬಾರಿ ಸೌಂದರ್ಯ ಉತ್ಪನ್ನಗಳು ಹಾಗೂ ಪಾರ್ಲರ್ ಚಿಕಿತ್ಸೆಗಳ ಮೊರೆ ಹೋಗುತ್ತಾರೆ. ಆದರೆ ಮುಖದ ಸೌಂದರ್ಯವನ್ನು ಹೆಚ್ಚಿಸಲು ಇಷ್ಟೆಲ್ಲಾ ಖರ್ಚು ಮಾಡಬೇಕೆಂದಿಲ್ಲ. ನೀವು ಪ್ರತಿದಿನ ಬೆಳಗ್ಗೆ ತಪ್ಪದೆ ಈ ಒಂದಷ್ಟು ಅಭ್ಯಾಸಗಳನ್ನು (morning routine) ಪಾಲಿಸಿದರೆ ಸಾಕು, ನಿಮ್ಮ ಮುಖ ನೈಸರ್ಗಿಕವಾಗಿ ಹೊಳೆಯುತ್ತದೆ ಮತ್ತು ತ್ವಚೆಯೂ ಆರೋಗ್ಯಕರವಾಗಿರುತ್ತದೆ. ಹಾಗಿದ್ದರೆ, ಮುಖ ಪಳ ಪಳ ಹೊಳೆಯಬೇಕೆಂದರೆ ಬೆಳಗ್ಗೆ ಯಾವೆಲ್ಲಾ ಅಭ್ಯಾಸಗಳನ್ನು ಪಾಲಿಸಬೇಕು ಎಂಬುದನ್ನು ನೋಡೋಣ ಬನ್ನಿ.
ಮುಖದ ಹೊಳಪು ಹೆಚ್ಚಿಸಲು ಬೆಳಗ್ಗೆ ಪಾಲಿಸಬೇಕಾದ ಅಭ್ಯಾಸಗಳು:
ತಣ್ಣೀರಿನಿಂದ ಮುಖ ತೊಳೆಯುವುದು: ಬೆಳಗ್ಗೆ ಎದ್ದ ತಕ್ಷಣ ಮುಖ ದಣಿದಂತೆ ಕಾಣುತ್ತದೆ. ಹಾಗಾಗಿ ಮುಖವನ್ನು ರಿಫ್ರೆಶ್ ಮಾಡಲು ತಣ್ಣೀರಿನಿಂದ ಮುಖವನ್ನು ತೊಳೆಯಬೇಕು. ಇದು ಚರ್ಮವನ್ನು ಬಿಗಿಗೊಳಿಸುತ್ತದೆ ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಮುಖ ತೊಳೆದ ನಂತರ ತಾಜಾ ಅಲೋವೆರಾ ಜೆಲ್ ಮುಖಕ್ಕೆ ಹಚ್ಚಬೇಕು. ಇದು ಚರ್ಮವನ್ನು ತೇವಗೊಳಿಸುತ್ತದೆ. ಇಲ್ಲದಿಲ್ಲದೆ ರೋಸ್ ವಾಟರ್ ಕೂಡ ಮುಖಕ್ಕೆ ಸಿಂಪಡಿಸಬಹುದು. ಇದು ನೈಸರ್ಗಿಕ ಟೋನರ್ನಂತೆ ಚರ್ಮದ ಮೇಲೆ ಕೆಲಸ ಮಾಡುತ್ತದೆ.
ಉಗುರು ಬೆಚ್ಚಗಿನ ನೀರು ಕುಡಿಯುವುದು: ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆ ರಸವನ್ನು ಹಿಂಡಿ ಕುಡಿಯಬೇಕಂತೆ. ಈ ಎರಡೂ ವಸ್ತುಗಳು ಚರ್ಮವನ್ನು ಒಳಗಿನಿಂದ ಸ್ವಚ್ಛಗೊಳಿಸಲು ಮತ್ತು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮತ್ತು ನಿಂಬೆ ಹಣ್ಣಿನಲ್ಲಿರುವ ವಿಟಮಿನ್ ಸಿ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
ಲಘು ವ್ಯಾಯಾಮ ಅಥವಾ ಯೋಗ: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ವ್ಯಾಯಾಮ ಎಷ್ಟು ಮುಖ್ಯವೋ ಅದೇ ರೀತಿ ತ್ವಚೆಯ ಆರೋಗ್ಯ ವೃದ್ಧಿಗೂ ಇದು ಸಹಕಾರಿ. ಪ್ರತಿದಿನ ಬೆಳಗ್ಗೆ 15 ನಿಮಿಷಗಳ ವಾಕಿಂಗ್, ಸ್ಟ್ರೆಚಿಂಗ್ ಅಥವಾ ಸೂರ್ಯ ನಮಸ್ಕಾರ ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸಲು ಸಹಕಾರಿ. ವ್ಯಾಯಾಮವು ಬೆವರಿನ ಮೂಲಕ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ, ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.
ಧ್ಯಾನ ಮಾಡುವುದು: ಮುಖದ ಸೌಂದರ್ಯ, ಆರೋಗ್ಯವನ್ನು ಹೆಚ್ಚಿಸಲು ದುಬಾರಿ ಕ್ರೀಮ್ಗಳು ಮಾತ್ರವಲ್ಲ ಮಾನಸಿಕ ಶಾಂತಿಯೂ ಅದಕ್ಕೆ ಅತ್ಯಗತ್ಯ. ನಾವು ಒತ್ತಡದಿಂದ ಇದ್ದರೆ, ನಮ್ಮ ತ್ವಚೆಯೂ ಸಹ ಸುಕ್ಕುಗಟ್ಟಿದಂತಾಗುತ್ತದೆ. ಹಾಗಾಗಿ ಮಾನಸಿಕ ಶಾಂತಿಗಾಗಿ ಪ್ರತಿನಿತ್ಯ ಬೆಳಗ್ಗೆ 10 ರಿಂದ 15 ನಿಮಿಷಗಳ ಕಾಲ ಧ್ಯಾನ ಮಾಡಿ. ಇದು ತ್ವಚೆ, ಮನಸ್ಸು ಎರಡಕ್ಕೂ ಪ್ರಯೋಜನಕಾರಿ. ಅಲ್ಲದೆ ಧ್ಯಾನ ನಿಮ್ಮನ್ನು ಸಕಾರಾತ್ಮಕವಾಗಿ ಇರಿಸುತ್ತದೆ.
ಆರೋಗ್ಯಕರ ಆಹಾರ ಸೇವನೆ: ತ್ವಚೆಯ ಹೊಳಪನ್ನು ಹೆಚ್ಚಿಸಲು ದೇಹಕ್ಕೆ ಒಳಗಿನಿಂದ ಪೋಷಣೆಯನ್ನು ನೀಡುವುದು ಕೂಡ ತುಂಬಾನೇ ಮುಖ್ಯ. ಅದಕ್ಕಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆರೋಗ್ಯಕರ ಆಹಾರಗಳನ್ನೇ ಸೇವನೆ ಮಾಡಬೇಕು. ಒಂದು ಸೇಬು, ನಾಲ್ಕೈದು ನೆನೆಸಿದ ಬಾದಾಮಿ ಮತ್ತು ಒಂದು ಲೋಟ ಎಳ ನೀರು ಸೇರಿದಂತೆ ಆರೋಗ್ಯಕರ ಆಹಾರ ಸೇವನೆಯನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಖಂಡಿತವಾಗಿಯೂ ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸಲು ಸಹಕಾರಿ.



