
ನವದೆಹಲಿ, 26-10-2026 : ನವೆಂಬರ್ 1ರಿಂದ ದೇಶದ ಎಲ್ಪಿಜಿ ಗ್ರಾಹಕರು ಗ್ಯಾಸ್ ಸಿಲಿಂಡರ್ ಬೆಲೆ ಹಾಗೂ ಆಧಾರ್ ಇ-ಕೆವೈಸಿ ನಿಯಮಗಳ ಕುರಿತು ಗಮನಹರಿಸಬೇಕಿದೆ. ಪ್ರತಿ ತಿಂಗಳ ಮೊದಲ ದಿನದಂದು ತೈಲ ಮಾರುಕಟ್ಟೆ ಕಂಪನಿಗಳು ಗೃಹಬಳಕೆ ಮತ್ತು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ದರಗಳನ್ನು ಪರಿಶೀಲಿಸುವ ಪ್ರಕ್ರಿಯೆ ಮುಂದುವರಿಯಲಿದ್ದು, ನವೆಂಬರ್ ತಿಂಗಳ ಹೊಸ ದರಗಳು ಪ್ರಕಟವಾಗುವ ನಿರೀಕ್ಷೆಯಿದೆ. ಆದರೆ, ಸಿಲಿಂಡರ್ ಬೆಲೆ ಏರಿಕೆಯಾಗಲಿದೆಯೇ ಅಥವಾ ಇಳಿಕೆಯಾಗಲಿದೆಯೇ ಎಂಬುದು ಅಧಿಕೃತ ಪ್ರಕಟಣೆಯ ಬಳಿಕವಷ್ಟೇ ಸ್ಪಷ್ಟವಾಗಲಿದೆ.
ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಪಡೆಯುವ ಅರ್ಹ ಗ್ರಾಹಕರಿಗೆ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ ಅಥವಾ ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯವಾಗಿದೆ. ಈ ನಿಯಮ ಅಕ್ಟೋಬರ್ 1ರಿಂದಲೇ ಜಾರಿಗೆ ಬಂದಿದ್ದು, ದೃಢೀಕರಣ ಪೂರ್ಣಗೊಳಿಸದ ಗ್ರಾಹಕರಿಗೆ ಸಬ್ಸಿಡಿ ಸಹಿತ ಸಿಲಿಂಡರ್ ಬುಕಿಂಗ್ನಲ್ಲಿ ತೊಂದರೆಯಾಗುವ ಸಾಧ್ಯತೆಯಿದೆ. ಇಂದೇ ಗ್ರಾಹಕರು ತಮ್ಮ ಇ-ಕೆವೈಸಿ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವುದು ಸೂಕ್ತ. ಇಂಡೇನ್ ಗ್ರಾಹಕರು IndianOil ONE, ಭಾರತ್ ಗ್ಯಾಸ್ ಗ್ರಾಹಕರು HelloBPCL ಹಾಗೂ ಎಚ್ಪಿ ಗ್ಯಾಸ್ ಗ್ರಾಹಕರು HP PAY ಆ್ಯಪ್ ಮೂಲಕ ಅಥವಾ ತಮ್ಮ ಅಧಿಕೃತ ಗ್ಯಾಸ್ ವಿತರಕರನ್ನು ಸಂಪರ್ಕಿಸಿ ದೃಢೀಕರಣದ ಕುರಿತು ಮಾಹಿತಿ ಪಡೆಯಬಹುದು. ಈಗಾಗಲೇ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸಿರುವವರು ಮತ್ತೆ ಪ್ರಕ್ರಿಯೆ ನಡೆಸುವ ಅಗತ್ಯವಿಲ್ಲ ಎಂದು ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.



