News

ಮಾಂಜಾ ದಾರದಿಂದ ಅಮಾಯಕರ ಜೀವಹಾನಿ ಸಹಿಸಲು ಸಾಧ್ಯವಿಲ್ಲ; ನಿಷೇಧ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಸರಕಾರ ಬದ್ಧ: ಡಾ. ಜಿ. ಪರಮೇಶ್ವರ್

ಬೆಂಗಳೂರು, 23-10-2026 : ಗಾಳಿಪಟ ಹಾರಿಸಲು ಬಳಸುವ ಅಪಾಯಕಾರಿ ಮಾಂಜಾ ದಾರಕ್ಕೆ ಸಿಲುಕಿ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳನ್ನು ರಾಜ್ಯ ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಇಂತಹ ದುರಂತಗಳಿಗೆ ಕಡಿವಾಣ ಹಾಕಲು ನಿಷೇಧಿತ ದಾರದ ಮಾರಾಟ ಮತ್ತು ಬಳಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದ ವಿದ್ಯಾ ಮಂಜುನಾಥ ಗೌಡರ್ ಅವರ ಕುತ್ತಿಗೆಗೆ ಮಾಂಜಾ ದಾರ ಸಿಲುಕಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವ ಘಟನೆ ತೀವ್ರ ನೋವು ಮತ್ತು ಕಳವಳ ಉಂಟುಮಾಡಿದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಈಗಾಗಲೇ ಅಪಾಯಕಾರಿ ಮಾಂಜಾ ದಾರದ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದ್ದರೂ, ಇಂತಹ ದಾರಗಳ ಬಳಕೆ ಮುಂದುವರಿಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಈಗಿರುವ ನಿಷೇಧವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸರಕಾರ ಕ್ರಮ ಕೈಗೊಳ್ಳಲಿದೆ. ಅಗತ್ಯವಿದ್ದಲ್ಲಿ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕೆಲವರ ಕ್ಷಣಿಕ ಮನೋರಂಜನೆ ಅಥವಾ ಮೋಜಿಗಾಗಿ ಅಮಾಯಕರು ಜೀವ ಕಳೆದುಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಗಾಳಿಪಟ ಹಾರಿಸುವ ಹವ್ಯಾಸ ಮತ್ತೊಬ್ಬರ ಜೀವಕ್ಕೆ ಅಪಾಯ ತಂದೊಡ್ಡುವ ಚಟುವಟಿಕೆಯಾಗಿ ಮಾರ್ಪಡಬಾರದು. ಮಾಂಜಾ ದಾರದಿಂದ ಸಾರ್ವಜನಿಕರ ಸುರಕ್ಷತೆಗೆ ಅಪಾಯ ಉಂಟಾಗುವ ಸಾಧ್ಯತೆಯ ಅರಿವಿದ್ದೂ ಅದನ್ನು ಬಳಸುವುದು ಗಂಭೀರ ನಿರ್ಲಕ್ಷ್ಯವಾಗಿದ್ದು, ಇಂತಹ ಕೃತ್ಯಗಳಿಂದ ಜೀವಹಾನಿ ಸಂಭವಿಸಿದರೆ ಸಂಬಂಧಪಟ್ಟವರು ಕಾನೂನಿನ ಪ್ರಕಾರ ಹೊಣೆಗಾರರಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಮನುಷ್ಯನ ಜೀವಕ್ಕಿಂತ ದೊಡ್ಡ ಮನೋರಂಜನೆ ಯಾವುದೂ ಇಲ್ಲ. ಇಂತಹ ಘಟನೆಗಳನ್ನು ತಡೆಯುವುದು ಸರಕಾರದ ಜವಾಬ್ದಾರಿಯಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಮತ್ತು ನೈತಿಕ ಹೊಣೆಗಾರಿಕೆಯೂ ಆಗಿದೆ. ಗಾಳಿಪಟ ಹಾರಿಸುವುದನ್ನು ಸುರಕ್ಷಿತ ಮನೋರಂಜನೆಯಾಗಿ ಉಳಿಸಿಕೊಳ್ಳಬೇಕು; ಇತರರ ಜೀವಕ್ಕೆ ಅಪಾಯ ಉಂಟುಮಾಡುವ ಪ್ರವೃತ್ತಿಗೆ ಅವಕಾಶ ನೀಡಬಾರದು. ಸಾರ್ವಜನಿಕರ ಜೀವ ಮತ್ತು ಸುರಕ್ಷತೆಗೆ ಆದ್ಯತೆ ನೀಡಿ, ಅಪಾಯಕಾರಿ ಮಾಂಜಾ ದಾರದ ಬಳಕೆಗೆ ಪರಿಣಾಮಕಾರಿ ಕಡಿವಾಣ ಹಾಕಲು ರಾಜ್ಯ ಸರಕಾರ ದೃಢಸಂಕಲ್ಪ ಹೊಂದಿದೆ ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft