Health + News

ನಸುಕಿನ ಜಾವ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವ ಖಾದರ್ ದಿಢೀರ್ ಎಂಟ್ರಿ; ಹೊರಗಿನ ಮೆಡಿಕಲ್‌ಗೆ ಏಕೆ ಔಷಧಿ ಬರೆದು ಕೊಡ್ತೀರಾ ಎಂದು ಸಿಬ್ಬಂದಿಗೆ ತರಾಟೆ!

ಚನ್ನಪಟ್ಟಣ, 06-10-2026 : ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ನಸುಕಿನ ಜಾವ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಆಸ್ಪತ್ರೆಯಲ್ಲಿನ ವ್ಯವಸ್ಥೆ ಹಾಗೂ ರೋಗಿಗಳಿಗೆ ನೀಡಲಾಗುತ್ತಿರುವ ಸೇವೆಗಳ ಕುರಿತು ಪರಿಶೀಲನೆ ನಡೆಸಿದರು.

ಖಾಸಗಿ ಕಾರ್ಯಕ್ರಮದ ನಿಮಿತ್ತ ತಡರಾತ್ರಿ ಚನ್ನಪಟ್ಟಣಕ್ಕೆ ಆಗಮಿಸಿದ್ದ ಸಚಿವರು, ಸುಮಾರು 2ರಿಂದ 3 ಗಂಟೆಯ ವೇಳೆಯಲ್ಲಿ ಆಸ್ಪತ್ರೆಗೆ ತೆರಳಿ ಜನರಲ್ ವಾರ್ಡ್, ಐಸಿಯು, ಶೌಚಾಲಯ ಸೇರಿದಂತೆ ವಿವಿಧ ವಿಭಾಗಗಳನ್ನು ಪರಿಶೀಲಿಸಿದರು. ರಾತ್ರಿ ಪಾಳಿಯಲ್ಲಿದ್ದ ಸಿಬ್ಬಂದಿಯ ಹಾಜರಾತಿ ಹಾಗೂ ವೈದ್ಯರಿಂದ ಆಸ್ಪತ್ರೆಯಲ್ಲಿನ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದುಕೊಂಡರು. ಈ ವೇಳೆ ರೋಗಿಗಳು ಮತ್ತು ಅವರ ಕುಟುಂಬದವರೊಂದಿಗೂ ಸಚಿವರು ಮಾತನಾಡಿ ಸಮಸ್ಯೆಗಳನ್ನು ಆಲಿಸಿದರು.

ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳು ಲಭ್ಯವಿದ್ದರೂ ಕೆಲವು ಔಷಧಿಗಳನ್ನು ಹೊರಗಿನ ಮೆಡಿಕಲ್‌ಗಳಿಗೆ ಬರೆದುಕೊಡಲಾಗುತ್ತಿದೆ ಎಂಬ ವಿಚಾರ ಸಚಿವರ ಗಮನಕ್ಕೆ ಬಂದಿದ್ದು, ಇದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿರುವ ಔಷಧಿ ಮತ್ತು ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ರೋಗಿಗಳಿಗೆ ಸೇವೆ ನೀಡಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.

ಸಾರ್ವಜನಿಕರಿಗೆ ಸರ್ಕಾರಿ ಆಸ್ಪತ್ರೆಯಲ್ಲೇ ಅಗತ್ಯ ಚಿಕಿತ್ಸೆ ಮತ್ತು ಸೌಲಭ್ಯಗಳು ಸಮಯಕ್ಕೆ ಸರಿಯಾಗಿ ದೊರೆಯುವಂತೆ ನೋಡಿಕೊಳ್ಳಬೇಕು. ರೋಗಿಗಳಿಗೆ ಅನಗತ್ಯ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸುವಂತೆ ವೈದ್ಯರು ಹಾಗೂ ಸಿಬ್ಬಂದಿಗೆ ಖಾದರ್ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಚಿವರ ಈ ದಿಢೀರ್ ಮಧ್ಯರಾತ್ರಿ ಪರಿಶೀಲನೆ ಸರ್ಕಾರಿ ಆಸ್ಪತ್ರೆಗಳಲ್ಲಿನ ಸೇವಾ ಗುಣಮಟ್ಟ ಮತ್ತು ಸಿಬ್ಬಂದಿಯ ಕರ್ತವ್ಯನಿಷ್ಠೆಯ ಕುರಿತು ಮತ್ತೊಮ್ಮೆ ಗಮನ ಸೆಳೆದಿದೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft