News Sports

ಆಸ್ಟ್ರೇಲಿಯಾ ವಿರುದ್ಧ ಅಬ್ಬರದ ದ್ವಿಶತಕ ಬಾರಿಸಿದ ಅಂಡರ್-19 ದಾಂಡಿಗ : ಬೌಲರ್‌ಗಳಿಗೆ ಸಿಂಹಸ್ವಪ್ನವಾದ 17ರ ಹರೆಯದ ಲಕ್ಷ್ಯ ರಾಯ್ ಚಂದಾನಿ

ರಾಜ್‌ಕೋಟ್, ಸೆಪ್ಟೆಂಬರ್ 29 : ಆಸ್ಟ್ರೇಲಿಯಾ ಅಂಡರ್-19 ವಿರುದ್ಧದ ಮೊದಲ ಅನಧಿಕೃತ ಟೆಸ್ಟ್‌ನಲ್ಲಿ ಭಾರತದ 17 ವರ್ಷದ ಆರಂಭಿಕ ಬ್ಯಾಟರ್ ಲಕ್ಷ್ಯ ರಾಯ್‌ಚಂದಾನಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ದಾಖಲೆಯ ದ್ವಿಶತಕ ಬಾರಿಸಿ ಗಮನ ಸೆಳೆದಿದ್ದಾರೆ. ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಕ್ಷ್ಯ ಅವರ ಭರ್ಜರಿ ಇನ್ನಿಂಗ್ಸ್‌ನ ನೆರವಿನಿಂದ ಭಾರತ ಅಂಡರ್-19 ತಂಡ ಆಸ್ಟ್ರೇಲಿಯಾ ವಿರುದ್ಧ ಭಾರಿ ಮುನ್ನಡೆ ಸಾಧಿಸಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡ 217 ರನ್‌ಗಳಿಗೆ ಆಲೌಟ್ ಆದ ಬಳಿಕ ಬ್ಯಾಟಿಂಗ್ ಆರಂಭಿಸಿದ ಭಾರತ ಆರಂಭಿಕ ಹಂತದಲ್ಲಿ ಕೆಲವು ವಿಕೆಟ್ ಕಳೆದುಕೊಂಡರೂ ಲಕ್ಷ್ಯ ರಾಯ್‌ಚಂದಾನಿ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತರು. 281 ಎಸೆತಗಳನ್ನು ಎದುರಿಸಿದ ಲಕ್ಷ್ಯ 240 ರನ್‌ಗಳನ್ನು ಸಿಡಿಸಿದ್ದು, ಅವರ ಇನ್ನಿಂಗ್ಸ್‌ನಲ್ಲಿ 24 ಬೌಂಡರಿ ಹಾಗೂ 4 ಸಿಕ್ಸರ್‌ಗಳು ಸೇರಿವೆ. ಆಸ್ಟ್ರೇಲಿಯಾ U-19 ವಿರುದ್ಧ ಯೂತ್ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಗೂ ಅವರು ಪಾತ್ರರಾಗಿದ್ದಾರೆ.

ಲಕ್ಷ್ಯ ಅವರಿಗೆ ನಾಯಕ ಯಶವರ್ಧನ್ ಚೌಹಾಣ್ ಹಾಗೂ ನಂತರ ಮೊಹಿತ್ ಉಲ್ವಾ ಉತ್ತಮ ಸಾಥ್ ನೀಡಿದರು. ಒಂದು ಹಂತದಲ್ಲಿ ಭಾರತ 293 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದರೂ, ಲಕ್ಷ್ಯ ಮತ್ತು ಮೊಹಿತ್ ಉಲ್ವಾ ಒಂಬತ್ತನೇ ವಿಕೆಟ್‌ಗೆ 180 ರನ್‌ಗಳ ಮಹತ್ವದ ಜೊತೆಯಾಟವಾಡಿದರು. ಮೊಹಿತ್ ಉಲ್ವಾ 92 ರನ್‌ಗಳ ಕೊಡುಗೆ ನೀಡಿದ್ದು, ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 494 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಇದರಿಂದ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ 277 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ದೊರೆಯಿತು.

ಆಸ್ಟ್ರೇಲಿಯಾ ವಿರುದ್ಧದ ಈ ಅದ್ಭುತ ಪ್ರದರ್ಶನ ಲಕ್ಷ್ಯ ಅವರ ಇತ್ತೀಚಿನ ಉತ್ತಮ ಫಾರ್ಮ್‌ಗೆ ಮತ್ತೊಂದು ಸೇರ್ಪಡೆಯಾಗಿದೆ. ಇದೇ ತಿಂಗಳ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಯೂತ್ ಏಕದಿನ ಪಂದ್ಯದಲ್ಲೂ ಅವರು ಅಜೇಯ 110 ರನ್ ಗಳಿಸಿದ್ದರು. ಇದೀಗ ಟೆಸ್ಟ್ ಮಾದರಿಯಲ್ಲೂ ದ್ವಿಶತಕದ ಮೂಲಕ ಸಾಮರ್ಥ್ಯ ಮೆರೆದಿರುವ ಲಕ್ಷ್ಯ ರಾಯ್‌ಚಂದಾನಿ, ಯುವ ಕ್ರಿಕೆಟ್‌ನಲ್ಲಿ ಭಾರತದ ಗಮನ ಸೆಳೆಯುತ್ತಿರುವ ಬ್ಯಾಟಿಂಗ್ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft