
ಕೊಪ್ಪಳ, ಸೆಪ್ಟೆಂಬರ್ 29 : ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯದೆ ಬಸ್ ತೆರಳಲು ಮುಂದಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಬಸ್ ಮುಂಭಾಗದಲ್ಲಿ ನಿಂತು ಏಕಾಂಗಿ ಪ್ರತಿಭಟನೆ ನಡೆಸಿದ ಘಟನೆ ಕೊಪ್ಪಳ ತಾಲೂಕಿನ ಬಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ವಿದ್ಯಾರ್ಥಿನಿಯ ಪ್ರತಿಭಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹ್ಯಾಟಿ–ಮುಂಡರಗಿ ಮಾರ್ಗವಾಗಿ ಕೊಪ್ಪಳಕ್ಕೆ ತೆರಳುತ್ತಿದ್ದ ಬಸ್ ಅನ್ನು ಬಿ.ಹೊಸಹಳ್ಳಿ ಗ್ರಾಮದ ಬಳಿ ವಿದ್ಯಾರ್ಥಿಗಳು ತಡೆದಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯೊಬ್ಬಳು ಬಸ್‌ನ ಮುಂಭಾಗದಲ್ಲಿ ನಿಂತು, ಶಾಲೆಯಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಬಸ್ ನಿಲ್ಲಿಸದೆ ತೆರಳಿದರೆ ವಿದ್ಯಾರ್ಥಿಗಳು ಶಾಲೆಗೆ ಹೇಗೆ ತೆರಳಬೇಕು ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಮ್ಮ ಶೈಕ್ಷಣಿಕ ಜೀವನ ಹಾಳು ಮಾಡುತ್ತೀರಾ?” ಎಂದು ಪ್ರಶ್ನಿಸಿದ ವಿದ್ಯಾರ್ಥಿನಿ, ವಿದ್ಯಾರ್ಥಿಗಳಿಗಾಗಿ ಬಸ್ ನಿಲ್ಲಿಸಿ ಶಾಲೆಗೆ ತೆರಳಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ವಿದ್ಯಾರ್ಥಿಗಳ ಪ್ರಯಾಣದ ಸಮಸ್ಯೆ ಹಾಗೂ ಪರೀಕ್ಷಾ ಸಮಯದಲ್ಲಿ ಬಸ್ ಸೇವೆಯ ಅಗತ್ಯತೆಯನ್ನು ವಿದ್ಯಾರ್ಥಿನಿಯ ಪ್ರತಿಭಟನೆ ಎತ್ತಿ ತೋರಿಸಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿದ್ಯಾರ್ಥಿಗಳ ಸಾರಿಗೆ ಸಮಸ್ಯೆ ಕುರಿತು ಗಮನ ಸೆಳೆದಿದೆ. ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸಮಯದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ದೊರೆಯಬೇಕು ಎಂಬ ಬೇಡಿಕೆ ಈ ಘಟನೆಯ ಮೂಲಕ ಮುನ್ನೆಲೆಗೆ ಬಂದಿದೆ.



