News

ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರದ ಸಂಚು : ಮುಸ್ಲಿಂ ವ್ಯಕ್ತಿಯ ಹತ್ಯೆಗೆ ನಡೆದಿತ್ತೇ₹24 ಲಕ್ಷ ಸುಪಾರಿ? ಪ್ರಕರಣ ದಾಖಲು

ಮಂಗಳೂರು, ಸೆಪ್ಟೆಂಬರ್ 28 : ಹಿಂದುತ್ವ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಮಿತ್ತೊಟ್ಟು-ಕಾಶಿಪಟ್ಣ ನಿವಾಸಿ ಅಭಿಷೇಕ್ ನೀಡಿರುವ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು, ಪ್ರಕರಣದ ತನಿಖೆಯನ್ನು ಮಂಗಳೂರು ಸಿಸಿಬಿಗೆ ವಹಿಸಲಾಗಿದೆ.

ದೂರಿನ ಪ್ರಕಾರ, ಉಡುಪಿಯ ಸುದೀಪ್ ಎಂಬಾತ ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ಪ್ರತೀಕಾರದ ಕುರಿತು ಪದೇಪದೇ ಮಾತನಾಡುತ್ತಿದ್ದ ಹಾಗೂ ಮತ್ತೊಬ್ಬ ವ್ಯಕ್ತಿಯ ಹತ್ಯೆ ನಡೆಸುವಂತೆ ಪ್ರಚೋದಿಸಿದ್ದಾನೆ ಎಂದು ಆರೋಪಿಸಲಾಗಿದೆ. ಉಡುಪಿಯೊಂದರಲ್ಲಿ ನಡೆದ ಸಭೆಯಲ್ಲಿ ಸುದೀಪ್ ಹಾಗೂ ಮಹೇಶ್ ಎಂಬಾತನನ್ನು ಪರಿಚಯಿಸಲಾಗಿದ್ದು, ಬಳಿಕ ಕಾರ್ಕಳ ಸಮೀಪದಲ್ಲಿಯೂ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಕೊಲೆ ಕೃತ್ಯ ನಡೆಸಿದರೆ ಒಟ್ಟು ₹24 ಲಕ್ಷ ನೀಡುವುದಾಗಿ ಹಾಗೂ ಆರೋಪಿಗಳು ಜೈಲು ಸೇರಿದರೆ ಅವರ ಕುಟುಂಬಗಳಿಗೆ ಮಾಸಿಕವಾಗಿ ದಿನಸಿ ಮತ್ತು ಮನೆ ಖರ್ಚಿಗೆ ಹಣ ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದರ ಮುಂದುವರಿದ ಭಾಗವಾಗಿ ಕಿನ್ನಿಪದವಿಯ ವ್ಯಕ್ತಿಯೊಬ್ಬರ ಫೋಟೋವನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿ, ಆತನ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಸೂಚಿಸಲಾಗಿತ್ತು ಎಂದು ಅಭಿಷೇಕ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು ಹಾಗೂ ಕೀರ್ತನ್ ಕಾರಿನಲ್ಲಿ ಕಿನ್ನಿಪದವಿಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ, ಕೊಲೆ ಕೃತ್ಯಕ್ಕಾಗಿ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ಚಿಂತನ್ ಗುಂಡ್ಯ ಎಂಬಾತನನ್ನು ಸಂಪರ್ಕಿಸಲಾಗಿತ್ತು ಹಾಗೂ ಕೃತ್ಯಕ್ಕೆ ಬಳಸಲು ಎರಡು ತಲವಾರುಗಳನ್ನು ಸಿದ್ಧಪಡಿಸಲಾಗಿತ್ತು ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖವಾಗಿದೆ. ಈ ಸಂಬಂಧ ವಾಟ್ಸ್‌ಆ್ಯಪ್ ಚಾಟ್‌ಗಳು, ಸ್ಕ್ರೀನ್‌ಶಾಟ್‌ಗಳು ಸೇರಿದಂತೆ ವಿವಿಧ ಮಾಹಿತಿಗಳು ತಮ್ಮ ಮೊಬೈಲ್‌ನಲ್ಲಿವೆ ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ.

ಈ ನಡುವೆ ತಮ್ಮ ಪತ್ನಿಗೆ ಹೆರಿಗೆಯಾಗಿದ್ದರಿಂದ ಹಾಗೂ ಅಪರಾಧ ಕೃತ್ಯದಲ್ಲಿ ಭಾಗಿಯಾದರೆ ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂಬ ಭಯದಿಂದ ತಾವು ಕೃತ್ಯದಿಂದ ಹಿಂದೆ ಸರಿದಿದ್ದಾಗಿ ಅಭಿಷೇಕ್ ಹೇಳಿಕೊಂಡಿದ್ದಾರೆ. ಪ್ರಕರಣದ ಕುರಿತು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು, ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದ್ದು, ತನಿಖೆಯ ಮೂಲಕ ವಾಸ್ತವಾಂಶಗಳನ್ನು ಪತ್ತೆಹಚ್ಚಿ ಕಾನೂನುಬದ್ಧವಾಗಿ ಸ್ವೀಕಾರಾರ್ಹವಾದ ಸಾಕ್ಷ್ಯಗಳನ್ನು ಸಂಗ್ರಹಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಎಫ್‌ಐಆರ್ ಮತ್ತು ದೂರುದಾರರ ಹೇಳಿಕೆಗಳಲ್ಲಿ ಉಲ್ಲೇಖವಾಗಿರುವ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದಲೇ ದೃಢಪಡಬೇಕಿದೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft