Health + News

ಖಾಸಗಿ ಆಸ್ಪತ್ರೆಯಿಂದ ಕೈಬಿಟ್ಟಿದ್ದ, ಸಾವಿನಂಚಿನಲ್ಲಿದ್ದ 33 ವಾರಗಳ ಗರ್ಭಿಣಿ, ಅವಧಿಪೂರ್ವ ಶಿಶು ರಕ್ಷಣೆ: ಮಂಗಳೂರಿನ ಲೇಡಿ ಗೋಷನ್ ಆಸ್ಪತ್ರೆ ವೈದ್ಯರ ಯಶಸ್ವಿ ಸಂಕೀರ್ಣ ಶಸ್ತ್ರಚಿಕಿತ್ಸೆ , ವ್ಯಾಪಕ ಶ್ಲಾಘನೆ!

ಮಂಗಳೂರು, ಸೆ.28 : ತೀವ್ರ ರಕ್ತಸ್ರಾವದಿಂದ ಜೀವನ್ಮರಣ ಹೋರಾಟದಲ್ಲಿದ್ದ 33 ವಾರಗಳ ಗರ್ಭಿಣಿ ಹಾಗೂ ಅವಧಿಪೂರ್ವ ಮಗುವನ್ನು ಮಂಗಳೂರಿನ ಸರ್ಕಾರಿ ಲೇಡಿ ಗೋಷನ್ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿ ರಕ್ಷಿಸಿದೆ. ಉಡುಪಿ ಜಿಲ್ಲೆಯ ಖಾಸಗಿ ಆಸ್ಪತ್ರೆಯಿಂದ ಅತ್ಯಂತ ಸಂಕೀರ್ಣ ಸ್ಥಿತಿಯಲ್ಲಿ ಮಂಗಳೂರಿಗೆ ರವಾನಿಸಲ್ಪಟ್ಟ ಮಹಿಳೆಗೆ ಬಹು-ವೈದ್ಯಕೀಯ ತಜ್ಞರ ತಂಡ ಸತತ ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಚಿಕಿತ್ಸೆ ನೀಡಿದೆ.

33 ವಾರಗಳ ಗರ್ಭಿಣಿ ತೀವ್ರ ರಕ್ತಸ್ರಾವದೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆಯಲ್ಲಿ ಜರಾಯು ಗರ್ಭಕೋಶದ ದ್ವಾರವನ್ನು ಅಡ್ಡಗಟ್ಟಿರುವುದು ಹಾಗೂ ಗಂಭೀರ ತೊಡಕು ಉಂಟಾಗಿರುವುದು ಪತ್ತೆಯಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಶಸ್ತ್ರಚಿಕಿತ್ಸೆ ವೇಳೆ ಮೂತ್ರಕೋಶ ಸೇರಿದಂತೆ ಸುತ್ತಮುತ್ತಲಿನ ಅಂಗಾಂಗಗಳಿಗೆ ಹಾನಿಯಾಗುವ ಸಾಧ್ಯತೆ ಹಾಗೂ ಹೆಚ್ಚಿನ ಪ್ರಮಾಣದ ರಕ್ತಸ್ರಾವದ ಅಪಾಯವಿರುತ್ತದೆ. ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಮಹಿಳೆಯನ್ನು ತಕ್ಷಣ ಮಂಗಳೂರಿನ ಲೇಡಿ ಗೋಷನ್ ಆಸ್ಪತ್ರೆಗೆ ರವಾನಿಸಲಾಯಿತು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್. ಅವರ ನೇತೃತ್ವದಲ್ಲಿ ವಿವಿಧ ವಿಭಾಗಗಳ ತಜ್ಞರನ್ನು ಮುಂಚಿತವಾಗಿಯೇ ಶಸ್ತ್ರಚಿಕಿತ್ಸಾ ಕೊಠಡಿಗೆ ಸಜ್ಜುಗೊಳಿಸಲಾಯಿತು. ಕೆಎಂಸಿ ಪ್ರಸೂತಿ ವಿಭಾಗದ ಪ್ರೊ. ಡಾ. ನಿಖಿಲ್ ಶೆಟ್ಟಿ ಮುಖ್ಯ ಪ್ರಸೂತಿ ಶಸ್ತ್ರಚಿಕಿತ್ಸಕರಾಗಿ ಕಾರ್ಯನಿರ್ವಹಿಸಿದರು. ಡಾ. ಸುಷಮ್ ಶೆಟ್ಟಿ, ಡಾ. ಗಗನ್ ದೀಪ್ ಕೌರ್, ಡಾ. ಪೃಥ್ವಿ ಶೆಣೈ ಹಾಗೂ ಡಾ. ತನ್ವಿತಾ ಸಹಕರಿಸಿದರು. ಮೂತ್ರಕೋಶಕ್ಕೆ ಉಂಟಾಗಿದ್ದ ಗಂಭೀರ ಹಾನಿಯನ್ನು ಕೆಎಂಸಿ ತಜ್ಞ ವೈದ್ಯರಾದ ಡಾ. ಪ್ರಮೋದ್, ಡಾ. ಮೀಟ್ ಮತ್ತು ಡಾ. ಶಿವಾನಂದ್ ಅವರ ತಂಡ ಸರಿಪಡಿಸಿತು.

ಶಸ್ತ್ರಚಿಕಿತ್ಸೆಯ ಬಳಿಕ 33 ವಾರಗಳ ಅವಧಿಪೂರ್ವ ಮಗುವಿಗೆ ಮಕ್ಕಳ ತಜ್ಞೆ ಡಾ. ಆರುಷಿ ಅಗತ್ಯ ತುರ್ತು ಆರೈಕೆ ನೀಡಿ ನವಜಾತ ಶಿಶು ನಿಗಾ ಘಟಕಕ್ಕೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಿದರು. ಅರಿವಳಿಕೆ ತಜ್ಞೆ ಡಾ. ಶಿಲ್ಪಾ ಅವರು ಶಸ್ತ್ರಚಿಕಿತ್ಸೆಯುದ್ದಕ್ಕೂ ತಾಯಿಯ ಜೀವಲಕ್ಷಣಗಳನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಿದರು. ವಿವಿಧ ವಿಭಾಗಗಳ ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿಯ ಸಮನ್ವಯದ ಪ್ರಯತ್ನದಿಂದ ತಾಯಿ ಮತ್ತು ಮಗು ಇಬ್ಬರಿಗೂ ಅಗತ್ಯ ಚಿಕಿತ್ಸೆ ದೊರೆತಿದ್ದು, ಸಂಕೀರ್ಣ ತುರ್ತು ಚಿಕಿತ್ಸೆಯಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ತಂಡದ ಸಂಘಟಿತ ಕಾರ್ಯಕ್ಕೆ ಈ ಪ್ರಕರಣ ಮತ್ತೊಂದು ಉದಾಹರಣೆಯಾಗಿದೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft