
ಗರ್ಭಾವಸ್ಥೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವುದರಿಂದ ಮಗುವಿಗೆ ಅಪಾಯವಾಗುತ್ತದೆ ಎಂಬ ಹಲವು ರೀತಿಯ ಆತಂಕಗಳು ಹಾಗೂ ತಪ್ಪು ನಂಬಿಕೆಗಳು ಗರ್ಭಿಣಿಯರಲ್ಲಿ ಕಂಡುಬರುತ್ತವೆ. ಆದರೆ ವೈದ್ಯಕೀಯ ತಜ್ಞರ ಪ್ರಕಾರ, ಅಗತ್ಯಕ್ಕೆ ಅನುಗುಣವಾಗಿ ವೈದ್ಯರು ಸೂಚಿಸುವ ಸ್ಕ್ಯಾನಿಂಗ್ಗಳನ್ನು ಮಾಡಿಸಿಕೊಳ್ಳುವುದು ಗರ್ಭಾವಸ್ಥೆಯ ಆರೋಗ್ಯ ಮೇಲ್ವಿಚಾರಣೆಯ ಪ್ರಮುಖ ಭಾಗವಾಗಿದೆ. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸುರಕ್ಷಿತವಾಗಿದ್ದು, ಗರ್ಭದ ಬೆಳವಣಿಗೆ ಹಾಗೂ ಮಗುವಿನ ಆರೋಗ್ಯವನ್ನು ಗಮನಿಸಲು ಇದನ್ನು ಬಳಸಲಾಗುತ್ತದೆ ಎಂದು ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ. ವರ ಪ್ರಸಾದ್ ತಿಳಿಸಿದ್ದಾರೆ.
ಗರ್ಭಾವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಒಂದೇ ರೀತಿಯ ಸ್ಕ್ಯಾನಿಂಗ್ ಅಗತ್ಯವಿರುವುದಿಲ್ಲ. ವೈದ್ಯರ ನಿರ್ಧಾರದ ಆಧಾರದ ಮೇಲೆ ಗರ್ಭಧಾರಣೆಯನ್ನು ದೃಢಪಡಿಸುವ ಸ್ಕ್ಯಾನ್, NT ಸ್ಕ್ಯಾನ್, ಅನಾಮಲಿ ಸ್ಕ್ಯಾನ್ ಹಾಗೂ ಮಗುವಿನ ಬೆಳವಣಿಗೆ ಮತ್ತು ಪ್ರಸವದ ಮುನ್ನದ ಪರಿಸ್ಥಿತಿಯನ್ನು ಪರಿಶೀಲಿಸುವ ಸ್ಕ್ಯಾನ್ಗಳನ್ನು ಸೂಚಿಸಬಹುದು. ಅನಾಮಲಿ ಸ್ಕ್ಯಾನ್ನ್ನು ಸಾಮಾನ್ಯವಾಗಿ ಗರ್ಭಧಾರಣೆಯ 20ರಿಂದ 25ನೇ ವಾರದ ಅವಧಿಯಲ್ಲಿ ಮಾಡಬಹುದಾಗಿದ್ದು, ನಂತರದ ಸ್ಕ್ಯಾನಿಂಗ್ಗಳಲ್ಲಿ ಮಗುವಿನ ಬೆಳವಣಿಗೆ, ದೈಹಿಕ ಸ್ಥಿತಿ, ದ್ರವದ ಪ್ರಮಾಣ, ಹೃದಯದ ತಪಾಸಣೆ ಹಾಗೂ ತೂಕದಂತಹ ಅಂಶಗಳನ್ನು ಪರಿಶೀಲಿಸಬಹುದು.
ಗರ್ಭಿಣಿ ಆರೋಗ್ಯವಾಗಿದ್ದರೂ ನಿಯಮಿತ ಪ್ರಸವ-ಪೂರ್ವ ತಪಾಸಣೆಯನ್ನು ನಿರ್ಲಕ್ಷಿಸಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ. ತೂಕ, ರಕ್ತದೊತ್ತಡ ಸೇರಿದಂತೆ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಲಕಾಲಕ್ಕೆ ಪರಿಶೀಲಿಸುವುದು ಅಗತ್ಯ. ಎಕ್ಸ್-ರೇ ಅಗತ್ಯವಿರುವ ಸಂದರ್ಭದಲ್ಲಿಯೂ ಗರ್ಭಧಾರಣೆಯ ಸ್ಥಿತಿ, ಪರೀಕ್ಷೆಯ ಅಗತ್ಯ ಮತ್ತು ಯಾವ ಭಾಗದ ತಪಾಸಣೆ ಎಂಬುದನ್ನು ಪರಿಗಣಿಸಿ ವೈದ್ಯರು ಹಾಗೂ ರೇಡಿಯಾಲಜಿ ತಜ್ಞರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಸಾಧ್ಯವಾದಷ್ಟು ಕಡಿಮೆ ರೇಡಿಯೇಶನ್ನೊಂದಿಗೆ ತಾಯಿ ಮತ್ತು ಮಗುವಿನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡೇ ಪರೀಕ್ಷೆ ನಡೆಸುವುದು ಉದ್ದೇಶವಾಗಿರುತ್ತದೆ.
ಹೀಗಾಗಿ ‘ಸ್ಕ್ಯಾನ್ ಮಾಡಿದರೆ ಮಗುವಿಗೆ ಹಾನಿಯಾಗುತ್ತದೆ’ ಅಥವಾ ‘ಆರೋಗ್ಯವಾಗಿದ್ದರೆ ವೈದ್ಯರನ್ನು ಭೇಟಿ ಮಾಡುವ ಅಗತ್ಯವಿಲ್ಲ’ ಎಂಬ ಮೌಢ್ಯಗಳಿಗೆ ಒಳಗಾಗದೆ, ಗರ್ಭಾವಸ್ಥೆಯ ಪ್ರತಿಯೊಂದು ಹಂತದಲ್ಲೂ ಸಂಬಂಧಿತ ವೈದ್ಯರ ಸಲಹೆಯನ್ನು ಪಾಲಿಸುವುದು ಮುಖ್ಯ. ಅಗತ್ಯವಿರುವ ಪರೀಕ್ಷೆಗಳನ್ನು ಕೇವಲ ಭಯ ಅಥವಾ ತಪ್ಪು ನಂಬಿಕೆಗಳ ಕಾರಣದಿಂದ ತಪ್ಪಿಸಿಕೊಳ್ಳಬಾರದು. ಯಾವುದೇ ಸ್ಕ್ಯಾನಿಂಗ್ ಅಥವಾ ಎಕ್ಸ್-ರೇ ಬಗ್ಗೆ ಅನುಮಾನವಿದ್ದರೆ ಸ್ವಯಂ ನಿರ್ಧಾರ ಕೈಗೊಳ್ಳುವ ಬದಲು ಸಂಬಂಧಿತ ವೈದ್ಯರೊಂದಿಗೆ ಚರ್ಚಿಸುವುದು ಸೂಕ್ತ ಎಂದು ತಜ್ಞರು ಸಲಹೆ ನೀಡಿದ್ದಾರೆ.



