News

ಉತ್ತರ ಪ್ರದೇಶ : ರಕ್ಷಕರೇ ಭಕ್ಷಕರಾದರೆ!?ಫಾರ್ಮ್‌ಹೌಸ್‌ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಇಬ್ಬರು ಯುಪಿ ಪೊಲೀಸರು, ಇಬ್ಬರು CRPF ಸಿಬ್ಬಂದಿ ಬಂಧನ

ಅಮ್ರೋಹಾ, ಸೆಪ್ಟೆಂಬರ್ 24 : ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಇಬ್ಬರು ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಇಬ್ಬರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹರಿಯಾಣದ ಫತೇಹಾಬಾದ್ ಮೂಲದ ಸುಮಾರು 24 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಬಂಧಿತ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ನೆಪದಲ್ಲಿ ಮಹಿಳೆಯನ್ನು ಅಮ್ರೋಹಾಗೆ ಕರೆತರಲಾಗಿತ್ತು ಎನ್ನಲಾಗಿದೆ. ಸೆಪ್ಟೆಂಬರ್ 21ರಂದು ಸೋನಿಪತ್‌ನಲ್ಲಿ ಮಹಿಳೆ CRPF ಸಿಬ್ಬಂದಿಯೊಬ್ಬರನ್ನು ಭೇಟಿಯಾಗಿದ್ದು, ಬಳಿಕ ಮತ್ತೊಬ್ಬ CRPF ಸಿಬ್ಬಂದಿ ಅವರೊಂದಿಗೆ ಸೇರಿಕೊಂಡಿದ್ದರು. ಸೆಪ್ಟೆಂಬರ್ 22ರ ಸಂಜೆ ಅವರು ಮಹಿಳೆಯನ್ನು ಅಮ್ರೋಹಾದ ಹಸನ್‌ಪುರ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಮಾರ್ಗಮಧ್ಯೆ ಉತ್ತರ ಪ್ರದೇಶ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಒಬ್ಬರನ್ನು ಸೇರಿಸಿಕೊಂಡು ಫಾರ್ಮ್‌ಹೌಸ್‌ಗೆ ತೆರಳಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಮಹಿಳೆಯ ದೂರಿನ ಪ್ರಕಾರ, ಫಾರ್ಮ್‌ಹೌಸ್‌ನಲ್ಲಿ ಮೂವರು ಆರೋಪಿಗಳು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ನಾಲ್ಕನೇ ವ್ಯಕ್ತಿಯೂ ತನ್ನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದಾಗ ತಾನು ಆತನನ್ನು ಹೊರಗೆ ತಳ್ಳಿ ಕೊಠಡಿಯ ಬಾಗಿಲು ಹಾಕಿಕೊಂಡಿದ್ದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಬಳಿಕ ಆಕೆ ಆನ್‌ಲೈನ್‌ನಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆಯನ್ನು ಹುಡುಕಿ ಬೆಳಗ್ಗೆ ಸುಮಾರು 6 ಗಂಟೆಗೆ ಪೊಲೀಸರಿಗೆ ಕರೆ ಮಾಡಿದ್ದಾಳೆ. ಸ್ಥಳಕ್ಕೆ ಧಾವಿಸಿದ ಹಸನ್‌ಪುರ ಮತ್ತು ರಾಜಬಪುರ ಠಾಣೆಗಳ ಪೊಲೀಸರು ಮಹಿಳೆಯನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಬಂಧಿತ ಉತ್ತರ ಪ್ರದೇಶ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ನನ್ನು ಅಮಾನತುಗೊಳಿಸಿ ಇಲಾಖಾ ಕ್ರಮ ಆರಂಭಿಸಲಾಗಿದೆ. CRPFನ ಇಬ್ಬರು ಸಿಬ್ಬಂದಿ ವಿರುದ್ಧವೂ ಕಠಿಣ ಶಿಸ್ತು ಕ್ರಮಕ್ಕೆ ಸಂಬಂಧಿಸಿದ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಅಮ್ರೋಹಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಘಟನೆ ನಡೆದಿರುವುದಾಗಿ ಹೇಳಲಾಗಿರುವ ಫಾರ್ಮ್‌ಹೌಸ್ ಉತ್ತರಾಖಂಡದ ಸ್ವತಂತ್ರ ಶಾಸಕರೊಬ್ಬರಿಗೆ ಸೇರಿದೆ ಎನ್ನಲಾಗಿದ್ದು, ಆಸ್ತಿಯ ವ್ಯವಸ್ಥಾಪಕರನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft