ಸೋಪ್, ಶಾಂಪೂ, ಟೂತ್ಪೇಸ್ಟ್ಗೂ ‘ವೆಜ್–ನಾನ್ವೆಜ್’ ಗುರುತು ಕಟ್ಟುನಿಟ್ಟು ಆದೇಶ : ಆರೋಗ್ಯದ ಗುಣಮಟ್ಟಕ್ಕಿಂತ ಆಹಾರದ ಮೂಲವೇ ಸರ್ಕಾರಕ್ಕೆ ಮುಖ್ಯವೇ?
“ಯಾವುದು ರಾಸಾಯನಿಕ?, ಯಾವುದು ಗುಣಮಟ್ಟ ಹೀನ? ಎಂಬುದರ ಕುರಿತು ಚರ್ಚೆ ಇವರಿಗೆ ಬೇಕಿಲ್ಲ!?

ಹೊಸದಿಲ್ಲಿ, ಸೆಪ್ಟೆಂಬರ್ 22:
ಸೋಪ್, ಶಾಂಪೂ, ಟೂತ್ಪೇಸ್ಟ್, ಇತರ ಸೌಂದರ್ಯವರ್ಧಕಗಳು ಹಾಗೂ ಟಾಯ್ಲೆಟ್ರಿಸ್ಗಳ ಪ್ಯಾಕೆಟ್ಗಳ ಮೇಲೂ ‘ವೆಜ್–ನಾನ್ವೆಜ್’ ಗುರುತು ಕಡ್ಡಾಯಗೊಳಿಸುವ ಮೂಲಕ ಕೇಂದ್ರ ಸರಕಾರ ಹೊಸ ಲೇಬಲಿಂಗ್ ನಿಯಮ ಜಾರಿಗೆ ತಂದಿದೆ. ಸೆಪ್ಟೆಂಬರ್ 21ರಿಂದ ಜಾರಿಗೆ ಬಂದಿರುವ ತಿದ್ದುಪಡಿಯಂತೆ, ಸಸ್ಯಾಹಾರಿ ಮೂಲದ ಉತ್ಪನ್ನಗಳಿಗೆ ಹಸಿರು ಚುಕ್ಕೆ ಹಾಗೂ ಮಾಂಸಾಹಾರಿ ಮೂಲದ ಉತ್ಪನ್ನಗಳಿಗೆ ಕೆಂಪು ಅಥವಾ ಕಂದು ಚುಕ್ಕೆ ನಮೂದಿಸುವುದು ಕಡ್ಡಾಯವಾಗಿದೆ.
ಗ್ರಾಹಕರಿಗೆ ಉತ್ಪನ್ನದ ಮೂಲ ತಿಳಿಯಬೇಕು ಎಂಬ ಕಾರಣವನ್ನು ಈ ನಿಯಮಕ್ಕೆ ನೀಡಲಾಗುತ್ತಿದೆ. ಆದರೆ, ಸೋಪ್, ಶಾಂಪೂ ಅಥವಾ ಟೂತ್ಪೇಸ್ಟ್ ಖರೀದಿಸುವಾಗ ನಿಜಕ್ಕೂ ಜನರ ಪ್ರಮುಖ ಕಾಳಜಿ ಅದರಲ್ಲಿರುವ ಅಂಶಗಳು ಸುರಕ್ಷಿತವೇ, ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತದೆಯೇ, ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕಗಳಿವೆಯೇ ಎಂಬುದಾಗಿರಬೇಕಲ್ಲವೇ? ಉತ್ಪನ್ನದ ಗುಣಮಟ್ಟ ಮತ್ತು ಸುರಕ್ಷತೆಗಿಂತ ‘ವೆಜ್ನಾ–ನಾನ್ವೆಜ್ನಾ’ ಎಂಬ ಗುರುತಿಗೇ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವ ಈ ಕ್ರಮದ ಆದ್ಯತೆಯ ಬಗ್ಗೆ ಪ್ರಶ್ನೆಗಳು ಮೂಡುವಂತಾಗಿದೆ.
ವಿಶೇಷವಾಗಿ, 2018ರಲ್ಲೇ ಇಂತಹ ಗುರುತು ಕಡ್ಡಾಯಗೊಳಿಸುವ ಪ್ರಸ್ತಾವನೆ ಕುರಿತು ಚರ್ಚೆ ನಡೆದಿದ್ದರೂ, ಉತ್ಪನ್ನಗಳಲ್ಲಿನ ಸಸ್ಯಾಹಾರಿ ಅಥವಾ ಮಾಂಸಾಹಾರಿ ಅಂಶಗಳನ್ನು ಪ್ರಮಾಣೀಕರಿಸುವ ಸ್ಪಷ್ಟ ವ್ಯವಸ್ಥೆ ಇಲ್ಲ ಎಂಬ ಕಾರಣಕ್ಕೆ ಈ ವಿಚಾರದಲ್ಲಿ ಸಂಕೀರ್ಣತೆ ಮತ್ತು ಹೆಚ್ಚುವರಿ ನಿಯಂತ್ರಣದ ಹೊರೆ ಉಂಟಾಗಬಹುದು ಎಂದು ತಜ್ಞ ಮಂಡಳಿ ಅಭಿಪ್ರಾಯಪಟ್ಟಿತ್ತು. ಇದೀಗ ಅದೇ ರೀತಿಯ ಗುರುತನ್ನು ಕಡ್ಡಾಯಗೊಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಜನರ ಆರೋಗ್ಯ ಮತ್ತು ಗ್ರಾಹಕರ ಹಕ್ಕುಗಳ ದೃಷ್ಟಿಯಿಂದ ಉತ್ಪನ್ನದಲ್ಲಿ ಬಳಸಿರುವ ಅಪಾಯಕಾರಿ ಅಥವಾ ಗುಣಮಟ್ಟಹೀನ ಅಂಶಗಳು, ಸುರಕ್ಷತಾ ಮಾನದಂಡಗಳು, ಅಲರ್ಜಿಕಾರಕ ಪದಾರ್ಥಗಳು ಹಾಗೂ ಉತ್ಪನ್ನದ ಪರಿಣಾಮಗಳ ಕುರಿತು ಸ್ಪಷ್ಟ ಮಾಹಿತಿ ನೀಡುವುದು ಹೆಚ್ಚು ಮಹತ್ವದ್ದಾಗಿದೆ. ಆದರೆ, ‘ವೆಜ್–ನಾನ್ವೆಜ್’ ಎಂಬ ವರ್ಗೀಕರಣವೇ ಪ್ರಮುಖ ಮಾಹಿತಿಯಂತೆ ಪ್ಯಾಕೆಟ್ ಮೇಲೆ ಎದ್ದು ಕಾಣುವಂತೆ ಮಾಡುವ ಕ್ರಮವು, “ಇವರಿಗೆ ವೆಜ್–ನಾನ್ವೆಜ್ ಎಂಬುದೇ ಮುಖ್ಯ; ಬಳಸುತ್ತಿರುವ ಉತ್ಪನ್ನ ಆರೋಗ್ಯಕ್ಕೆ ಕೆಟ್ಟದ್ದೇ ಅಥವಾ ಅದರಲ್ಲಿ ದೋಷವಿದೆಯೇ ಎಂಬುದು ಮುಖ್ಯವಲ್ಲವೇ?” ಎಂಬ ಪ್ರಶ್ನೆಯನ್ನು ಸಾರ್ವಜನಿಕ ವಲಯದಲ್ಲಿ ಹುಟ್ಟುಹಾಕಿದೆ.



