News

ಬಿಹಾರದ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಗಂಭೀರ ಘಟನೆಯ ಕುರಿತು “ಇಂತಹ ಸಣ್ಣಪುಟ್ಟ ವಿಷಯಗಳು ನಡೆಯುತ್ತಿರುತ್ತವೆ’ ಎಂದ ಬಿಜೆಪಿ ಸಚಿವ ಶ್ರವಣ್ ಕುಮಾರ್! : ಸಾರ್ವಜನಿಕರಿಂದ ತೀವ್ರ ಆಕ್ರೋಶ

ಪಾಟ್ನಾ, ಸೆಪ್ಟೆಂಬರ್ 22 : ಬಿಹಾರದ ಜಮುಯಿಯಲ್ಲಿ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದ ಕುರಿತು ಸಚಿವ ಶ್ರವಣ್ ಕುಮಾರ್ ನೀಡಿರುವ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ. ಗಂಭೀರ ಸ್ವರೂಪದ ಘಟನೆಯನ್ನು ‘ಸಣ್ಣಪುಟ್ಟ ಘಟನೆಗಳು’ ಎಂದು ಬಣ್ಣಿಸಿರುವ ಸಚಿವರ ಹೇಳಿಕೆ, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಸರ್ಕಾರದ ಜವಾಬ್ದಾರಿಯುತ ನಿಲುವಿನ ಕುರಿತೇ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕೋಚಿಂಗ್ ತರಗತಿಯಿಂದ ಸ್ನೇಹಿತನೊಂದಿಗೆ ಹಿಂದಿರುಗುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಕೆಲವರು ತಡೆದು ಹಲ್ಲೆ ನಡೆಸಿ, ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಲು ಹಾಗೂ ಮೈ ಮುಟ್ಟಲು ಯತ್ನಿಸಿದ ಘಟನೆ ಜಮುಯಿಯಲ್ಲಿ ನಡೆದಿತ್ತು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿದ ಸಚಿವ ಶ್ರವಣ್ ಕುಮಾರ್, ಜಗತ್ತು ಸಂಪೂರ್ಣ ಅಪರಾಧ ಮುಕ್ತವಾಗಿಲ್ಲ ಹಾಗೂ ಇಂತಹ ‘ಸಣ್ಣಪುಟ್ಟ ಘಟನೆಗಳು’ ನಡೆಯುತ್ತಲೇ ಇರುತ್ತವೆ ಎಂದು ಹೇಳಿದ್ದಾರೆ. ಅಪರಾಧ ಎಸಗುವವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದ್ದರೂ, ಅಪ್ರಾಪ್ತ ಬಾಲಕಿಗೆ ಸಂಬಂಧಿಸಿದ ಗಂಭೀರ ಪ್ರಕರಣವೊಂದನ್ನು ‘ಸಣ್ಣಪುಟ್ಟ’ ಎಂದು ಉಲ್ಲೇಖಿಸಿರುವುದೇ ಅವರ ಹೇಳಿಕೆಯನ್ನು ವಿವಾದದ ಕೇಂದ್ರಬಿಂದುವಾಗಿಸಿದೆ.

ಸಚಿವರ ಈ ಹೇಳಿಕೆಗೆ ಸಾಮಾಜಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಅಪ್ರಾಪ್ತರ ಮೇಲಿನ ಕಿರುಕುಳದಂತಹ ಪ್ರಕರಣಗಳನ್ನು ಕ್ಷುಲ್ಲಕವಾಗಿ ಕಾಣದೆ, ಸಂತ್ರಸ್ತರಿಗೆ ಭದ್ರತೆ ಮತ್ತು ನ್ಯಾಯ ಒದಗಿಸುವುದು ಸರ್ಕಾರದ ಆದ್ಯತೆಯಾಗಬೇಕು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಇದೇ ವೇಳೆ ಜೆಡಿಯು ರಾಜ್ಯಾಧ್ಯಕ್ಷ ಉಮೇಶ್ ಕುಶ್ವಾಹ ಕೂಡ ಜಮುಯಿ ಘಟನೆಯನ್ನು ‘ಸಣ್ಣಪುಟ್ಟ’ ಘಟನೆ ಎಂದು ಬಣ್ಣಿಸಿರುವುದು ರಾಜಕೀಯ ಚರ್ಚೆಗೆ ಮತ್ತಷ್ಟು ಕಾರಣವಾಗಿದೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft