
ಮಧುಗಿರಿ, ಸೆ.21 : ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕುಣಿದಿದ್ದಕ್ಕೆ ಆಕ್ಷೇಪಿಸಿ ದಲಿತ ಸಮುದಾಯಕ್ಕೆ ಸೇರಿದ 17 ವರ್ಷದ ಬಾಲಕನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಆರೋಪದ ದಾರುಣ ಘಟನೆ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಕಸಾಪುರ ಗ್ರಾಮದಲ್ಲಿ ರವಿವಾರ ಅಪರಾಹ್ನ ನಡೆದಿದೆ. ಮೃತ ಬಾಲಕನನ್ನು ಪರಿಶಿಷ್ಟ ಜಾತಿಗೆ ಸೇರಿದ ಸಿಂಹಾದ್ರಿ (17) ಎಂದು ಗುರುತಿಸಲಾಗಿದೆ.
ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಕಸಾಪುರ ಗ್ರಾಮದ ಊರ ಮಾರಮ್ಮ ದೇವಾಲಯದ ಮುಂಭಾಗದ ರಸ್ತೆಯಲ್ಲಿ ನಾಯಕ ಮತ್ತು ಒಕ್ಕಲಿಗ ಸಮುದಾಯದ ವತಿಯಿಂದ ಗಣೇಶ ವಿಸರ್ಜನೆ ಮೆರವಣಿಗೆ ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಕುಣಿಯಲು ತೆರಳಿದ್ದ ಸಿಂಹಾದ್ರಿಗೆ ಆರೋಪಿ ಮಾರುತೇಶ ಎಂಬಾತ ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ಬೈದಿದ್ದಾನೆ ಎಂದು ಆರೋಪಿಸಲಾಗಿದೆ. ಗಣೇಶನನ್ನು ನೋಡಲು ಬಂದಿರುವುದಾಗಿ ಬಾಲಕ ಹೇಳಿದ ಬಳಿಕ ಆತನಿಗೆ ಕಪಾಳಕ್ಕೆ ಹೊಡೆದು, ರಸ್ತೆ ಬದಿಯಲ್ಲಿದ್ದ ಕಲ್ಲಿನಿಂದ ಎದೆ ಭಾಗಕ್ಕೆ ತೀವ್ರವಾಗಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತೀವ್ರವಾಗಿ ಗಾಯಗೊಂಡ ಸಿಂಹಾದ್ರಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದು, ಸ್ಥಳೀಯರು ಹಾಗೂ ಸ್ನೇಹಿತರು ಆತನನ್ನು ಮಧುಗಿರಿ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಜಾತಿಯ ಕಾರಣದಿಂದಲೇ ತನ್ನ ಮಗನನ್ನು ಹತ್ಯೆ ಮಾಡಲಾಗಿದೆ ಎಂದು ಮೃತನ ತಾಯಿ ಅನ್ನಪೂರ್ಣಾ ದೂರಿನಲ್ಲಿ ಆರೋಪಿಸಿದ್ದು, ಆರೋಪಿ ಹಾಗೂ ಆತನಿಗೆ ಕುಮ್ಮಕ್ಕು ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಮಿಡಿಗೇಶಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS), 2023ರ ಸೆಕ್ಷನ್ 103(1), 351(2), 352ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಬಾಲಕನ ಹತ್ಯೆಯನ್ನು ಖಂಡಿಸಿ ಹಾಗೂ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ದಲಿತ ಮುಖಂಡರು ಮಿಡಿಗೇಶಿ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದ್ದಾರೆ. ಮಾದಿಗ ಸಮುದಾಯದ ಮೇಲಿನ ದೌರ್ಜನ್ಯ ತಡೆಯಲು ವಿಶೇಷ ಕಾನೂನು ಜಾರಿಗೆ ಆಗ್ರಹಿಸಿ ದಲಿತ ಪರ ಸಂಘಟನೆಗಳು ಮಧುಗಿರಿ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಮುಂದಾಗಿವೆ.



