
ರಾಯಚೂರು, ಸೆಪ್ಟೆಂಬರ್ 19 : ರಾಯಚೂರು ಜಿಲ್ಲೆಯಲ್ಲಿ ನಡೆದಿರುವ ಮೂವರು ದಲಿತರ ಕೊಲೆ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ವಹಿಸಬೇಕು ಎಂದು ದಲಿತಪರ ಸಂಘಟನೆಗಳು ಆಗ್ರಹಿಸಿದ್ದು, ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ದಲಿತಪರ ಹೋರಾಟಗಾರ ರವೀಂದ್ರನಾಥ ಪಟ್ಟಿ ಎಚ್ಚರಿಕೆ ನೀಡಿದ್ದಾರೆ. ಭೂಮಾನಂದ ಕೊಲೆ, ಹೊಕ್ರಾಣಿಯ ಅಶ್ವಿನಿ ಹಾಗೂ ಲಿಂಗಸುಗೂರಿನ ಕರಡಕಲ್ ರಾಣೆಮ್ಮ ಕೊಲೆ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸುವಂತೆ ನಿರಂತರವಾಗಿ ಒತ್ತಾಯಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಶನಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರವೀಂದ್ರನಾಥ ಪಟ್ಟಿ, ಜಿಲ್ಲಾ ಪೊಲೀಸ್ ಇಲಾಖೆ ಭೂಮಾನಂದ ಪ್ರಕರಣದ ತನಿಖೆಯನ್ನು ಮಾತ್ರ ಸಿಐಡಿಗೆ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರೀಕ್ಷಕರಿಗೆ ಶಿಫಾರಸು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮೂರು ಪ್ರಕರಣಗಳೂ ಗಂಭೀರವಾಗಿದ್ದು, ಎಲ್ಲ ಪ್ರಕರಣಗಳ ತನಿಖೆಯನ್ನೂ ಸಿಐಡಿಗೆ ವಹಿಸಬೇಕು ಎಂಬುದು ಹೋರಾಟಗಾರರ ಪ್ರಮುಖ ಬೇಡಿಕೆಯಾಗಿದೆ ಎಂದು ಅವರು ಹೇಳಿದರು.
ಈ ಪ್ರಕರಣಗಳಲ್ಲಿ ಸಂತ್ರಸ್ತ ಕುಟುಂಬಗಳಿಗೆ ವಿವಿಧ ಸಚಿವರು, ಜನಪ್ರತಿನಿಧಿಗಳು ಹಾಗೂ ನಿಗಮ-ಮಂಡಳಿಗಳ ಅಧ್ಯಕ್ಷರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಆದರೆ, ಸಿಐಡಿ ತನಿಖೆ ವಹಿಸುವ ಕುರಿತು ಇದುವರೆಗೆ ಸ್ಪಷ್ಟ ಭರವಸೆ ದೊರೆತಿಲ್ಲ ಎಂದು ರವೀಂದ್ರನಾಥ ಪಟ್ಟಿ ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಅಜಯ್ ಸಿಂಗ್ ಅವರು ಹೋರಾಟಗಾರರೊಂದಿಗೆ ಸಭೆ ನಡೆಸಿದ್ದು, ಮುಖ್ಯಮಂತ್ರಿ ವಿವಿಧ ಕಾರ್ಯಗಳಲ್ಲಿ ನಿರತರಾಗಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 22ರವರೆಗೆ ಕಾಲಾವಕಾಶ ಕೇಳಿದ್ದಾರೆ ಎಂದು ಅವರು ತಿಳಿಸಿದರು.
ಮೂರು ಪ್ರಕರಣಗಳಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿವೆ. ಸಿಐಡಿ ತನಿಖೆಗೆ ವಹಿಸದಿದ್ದರೆ ಅನಿರ್ದಿಷ್ಟ ಧರಣಿ, ರಾಜ್ಯಾದ್ಯಂತ ರಸ್ತೆ ತಡೆ ಹಾಗೂ ‘ಬೆಂಗಳೂರು ಚಲೋ’ ಸೇರಿದಂತೆ ವಿವಿಧ ಹಂತದ ಹೋರಾಟಗಳನ್ನು ನಡೆಸಲಾಗುವುದು ಎಂದು ರವೀಂದ್ರನಾಥ ಪಟ್ಟಿ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ದಲಿತಪರ ಹೋರಾಟಗಾರ ಎಸ್. ಮಾರೆಪ್ಪ ಅವರು, ಕೊಲೆ ಪ್ರಕರಣಗಳಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವವರಿಗೆ ಬೆದರಿಕೆ ಹಾಕಲಾಗುತ್ತಿದೆ ಹಾಗೂ ರಾಜಕೀಯ ನಾಯಕರು ಆರೋಪಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.



