News

ಜೈಲು ಜಾಮರ್ ನಿಂದಾಗಿ ಸುತ್ತಮುತ್ತ ನೆಟ್ವರ್ಕ್ ಸಮಸ್ಯೆಯಿಂದ ಬೇಸತ್ತು ಸಿಡಿದೆದ್ದ ವಕೀಲರು; ಪ್ರಜಾಸೌಧ ಮುತ್ತಿಗೆಗೂ ಮುನ್ನವೇ ಪೊಲೀಸ್ ವಶ

ಮಂಗಳೂರು, ಸೆ.18 : ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಅಳವಡಿಸಿರುವ ಮೊಬೈಲ್ ನೆಟ್‌ವರ್ಕ್ ಜಾಮರ್‌ನಿಂದ ನ್ಯಾಯಾಲಯದ ಕಲಾಪಗಳು ಹಾಗೂ ಸಾರ್ವಜನಿಕರಿಗೆ ಉಂಟಾಗುತ್ತಿರುವ ನೆಟ್‌ವರ್ಕ್ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿದ್ದ ವಕೀಲರನ್ನು ಪೊಲೀಸರು ಕೋರ್ಟ್ ಆವರಣದಲ್ಲಿಯೇ ವಶಕ್ಕೆ ಪಡೆದ ಘಟನೆ ಶುಕ್ರವಾರ ನಡೆದಿದೆ.

ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇಣವ ನೇತೃತ್ವದಲ್ಲಿ ವಕೀಲರು ಜಿಲ್ಲಾ ನ್ಯಾಯಾಲಯದ ಆವರಣದಿಂದ ಪಡೀಲ್‌ನಲ್ಲಿರುವ ಪ್ರಜಾಸೌಧದತ್ತ ತೆರಳಿ, ಅಲ್ಲಿ ನಡೆಯುತ್ತಿದ್ದ ರಾಜ್ಯ ಸಚಿವ ಸಂಪುಟ ಸಭೆಯ ಸ್ಥಳಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ನಿಯೋಜಿಸಲಾಗಿದ್ದು, ವಕೀಲರು ಜಾಥಾ ಆರಂಭಿಸುವ ಮುನ್ನವೇ ಅವರನ್ನು ತಡೆದು ವಶಕ್ಕೆ ಪಡೆಯಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ವಕೀಲರ ನಡುವೆ ತಳ್ಳಾಟ, ಜಟಾಪಟಿ ನಡೆದಿರುವುದಾಗಿ ವರದಿಯಾಗಿದೆ.

ಜೈಲು ಜಾಮರ್‌ನಿಂದಾಗಿ ನ್ಯಾಯಾಲಯದ ದೈನಂದಿನ ಕಾರ್ಯಚಟುವಟಿಕೆಗಳಿಗೆ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರಿಗೆ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಎದುರಾಗುತ್ತಿದೆ ಎಂಬುದು ವಕೀಲರ ಪ್ರಮುಖ ಆರೋಪವಾಗಿದೆ. ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ಹಲವು ಬಾರಿ ತಂದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವಕೀಲರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಹಿಂದೆಯೂ ಪ್ರತಿಭಟನೆ ಹಾಗೂ ಕಾನೂನು ಹೋರಾಟ ನಡೆಸಲಾಗಿತ್ತು ಎಂದು ವರದಿಯಾಗಿದೆ.

ಜಾಮರ್ ಸಮಸ್ಯೆಗೆ ಸರ್ಕಾರ ತಕ್ಷಣ ಪರಿಹಾರ ಕಂಡುಕೊಳ್ಳಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ವಕೀಲರು ಪ್ರತಿಭಟನೆಗೆ ಸಜ್ಜಾಗಿದ್ದರು. ಆದರೆ ಜಾಥಾಕ್ಕೆ ಪೊಲೀಸರು ಅನುಮತಿ ನೀಡಿರಲಿಲ್ಲ. ಸಚಿವ ಸಂಪುಟ ಸಭೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಪ್ರಜಾಸೌಧ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಯನ್ನೂ ಬಿಗಿಗೊಳಿಸಲಾಗಿತ್ತು. ವಕೀಲರನ್ನು ವಶಕ್ಕೆ ಪಡೆದಿರುವ ಘಟನೆ ಇದೀಗ ಜೈಲು ಜಾಮರ್ ವಿವಾದವನ್ನು ಮತ್ತಷ್ಟು ಗಮನ ಸೆಳೆದಿದೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft