
ಹೊಸೂರು, ಸೆಪ್ಟೆಂಬರ್ 17 : ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಪ್ರಯಾಣ ದರ ವಸೂಲಿ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನತ್ತ ಸಂಚರಿಸುತ್ತಿದ್ದ 20ಕ್ಕೂ ಹೆಚ್ಚು ಖಾಸಗಿ ಬಸ್‌ಗಳ ವಿರುದ್ಧ ತಮಿಳುನಾಡು ಸಾರಿಗೆ ಇಲಾಖೆ ಅಧಿಕಾರಿಗಳು ದಿಢೀರ್ ಕಾರ್ಯಾಚರಣೆ ನಡೆಸಿದ್ದು, ಸುಮಾರು ₹25 ಲಕ್ಷ ದಂಡ ವಿಧಿಸಿದ್ದಾರೆ. ಹೊಸೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಮುಂಜಾನೆ 2 ಗಂಟೆಯಿಂದ ಬೆಳಗಿನ ಜಾವದವರೆಗೆ ಈ ತಪಾಸಣಾ ಕಾರ್ಯಾಚರಣೆ ನಡೆದಿದೆ.
ಕೇರಳ, ಪುದುಚೇರಿ ಹಾಗೂ ತಮಿಳುನಾಡಿನ ವಿವಿಧ ಜಿಲ್ಲೆಗಳಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಖಾಸಗಿ ಬಸ್‌ಗಳನ್ನು ಅಧಿಕಾರಿಗಳು ತಡೆದು ಪರಿಶೀಲನೆ ನಡೆಸಿದರು. ಪ್ರಯಾಣಿಕರಿಂದ ಹೆಚ್ಚುವರಿ ದರ ವಸೂಲಿ ಮಾಡಲಾಗುತ್ತಿದೆಯೇ, ಕಡ್ಡಾಯ ತೆರಿಗೆ ಪಾವತಿಸಲಾಗಿದೆಯೇ ಹಾಗೂ ಬಸ್‌ಗಳಿಗೆ ಅಗತ್ಯವಿರುವ ಪರವಾನಗಿ ಮತ್ತು ದಾಖಲೆಗಳು ಮಾನ್ಯವಾಗಿವೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿದರು.
ಪ್ರಯಾಣ ದರದ ರಸೀದಿಗಳು, ಪರವಾನಗಿ ಪತ್ರಗಳು ಹಾಗೂ ತೆರಿಗೆ ದಾಖಲೆಗಳ ಪರಿಶೀಲನೆ ವೇಳೆ ಕೆಲವು ಬಸ್‌ಗಳಲ್ಲಿ ಅಗತ್ಯ ದಾಖಲೆಗಳ ಕೊರತೆ ಕಂಡುಬಂದಿದೆ ಎಂದು ವರದಿಯಾಗಿದೆ. ಇನ್ನು ಕೆಲವು ಬಸ್‌ಗಳು ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಮೊತ್ತ ವಸೂಲಿ ಮಾಡಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲೇ ದಂಡ ವಿಧಿಸುವುದರ ಜೊತೆಗೆ ಬಸ್ ನಿರ್ವಾಹಕರಿಗೆ ನಿಯಮ ಪಾಲಿಸುವಂತೆ ಎಚ್ಚರಿಕೆ ನೀಡಲಾಗಿದೆ.
ಪ್ರಯಾಣಿಕರಿಂದ ಹೆಚ್ಚುವರಿ ದರ ವಸೂಲಿ ಹಾಗೂ ಸಾರಿಗೆ ನಿಯಮಗಳ ಉಲ್ಲಂಘನೆ ವಿರುದ್ಧ ತಪಾಸಣಾ ಕಾರ್ಯಾಚರಣೆ ಮುಂದುವರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹಬ್ಬ ಹಾಗೂ ರಜಾ ಸಂದರ್ಭಗಳಲ್ಲಿ ಪ್ರಯಾಣಿಕರ ಬೇಡಿಕೆ ಹೆಚ್ಚಾಗುವ ಸಮಯವನ್ನು ದುರುಪಯೋಗಪಡಿಸಿಕೊಂಡು ಹೆಚ್ಚುವರಿ ದರ ವಸೂಲಿ ಮಾಡುವ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಮಹತ್ವ ಪಡೆದಿದೆ.



