
ಹೊಸದಿಲ್ಲಿ, ಸೆಪ್ಟೆಂಬರ್ 7: ದಿಲ್ಲಿಯ ಸತ್ಯನಿಕೇತನ ಪ್ರದೇಶದಲ್ಲಿ ಪಿಜಿ ಹಾಸ್ಟೆಲ್ ಕಟ್ಟಡ ಕುಸಿದು ಬಿದ್ದ ಪರಿಣಾಮ ಅವಶೇಷಗಳಡಿ ಸಿಲುಕಿದ್ದ ವಿದ್ಯಾರ್ಥಿಯೊಬ್ಬ ಮೊಬೈಲ್ ಮೂಲಕ 11 ಸೆಕೆಂಡ್‌ಗಳ SOS ವಿಡಿಯೋ ಕರೆ ಮಾಡಿ ನೆರವು ಕೋರಿದ ಘಟನೆ ಆತಂಕ ಮೂಡಿಸಿದೆ. ಅವಶೇಷಗಳ ನಡುವೆ ಸಿಲುಕಿದ್ದ ವಿದ್ಯಾರ್ಥಿ ತನ್ನ ಸುತ್ತಲಿನ ಇಕ್ಕಟ್ಟಿನ ಪರಿಸ್ಥಿತಿಯನ್ನು ಮೊಬೈಲ್ ಕ್ಯಾಮೆರಾದಲ್ಲಿ ದಾಖಲಿಸಿ ಸಹಾಯಕ್ಕಾಗಿ ಮನವಿ ಮಾಡಿದ್ದಾನೆ.
ಆತ್ಮಾರಾಮ್ ಸನಾತನ ಧರ್ಮ ಕಾಲೇಜಿನ ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿ ಆದಿತ್ಯ ಎಂದು ಗುರುತಿಸಲಾಗಿರುವ ಯುವಕನ ವಿಡಿಯೋವನ್ನು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI) ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಬಳಿಕ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆದಿತ್ಯನನ್ನು ಸುರಕ್ಷಿತವಾಗಿ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಸ್ಥಿತಿ ಗಂಭೀರವಾಗಿಲ್ಲ ಎಂದು ವರದಿಯಾಗಿದೆ.
ರವಿವಾರ ಮಧ್ಯಾಹ್ನ ಸುಮಾರು 1:30ರ ವೇಳೆಗೆ ಕಟ್ಟಡ ಕುಸಿದಾಗ ಒಳಗೆ ಸುಮಾರು 40ರಿಂದ 50 ವಿದ್ಯಾರ್ಥಿಗಳು ಇದ್ದರು ಎಂದು ಅಂದಾಜಿಸಲಾಗಿದೆ. ಸುಮಾರು 50 ವರ್ಷ ಹಳೆಯದಾದ ಈ ಕಟ್ಟಡವನ್ನು ಬಾಲಕರ ಪಿಜಿಯಾಗಿ ಬಳಸಲಾಗುತ್ತಿತ್ತು. ದುರಂತದಲ್ಲಿ ಇದುವರೆಗೆ ಆರು ಮಂದಿ ಮೃತಪಟ್ಟಿದ್ದು, 11 ಮಂದಿಯನ್ನು ರಕ್ಷಿಸಲಾಗಿದೆ. ಗಾಯಗೊಂಡ 10 ಮಂದಿಯನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ. ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಈ ನಡುವೆ ಕಟ್ಟಡ ನಿರ್ಮಾಣದಲ್ಲೂ ಗಂಭೀರ ನಿಯಮ ಉಲ್ಲಂಘನೆ ನಡೆದಿರುವುದು ಬೆಳಕಿಗೆ ಬಂದಿದೆ. 55 ಚದರ ಗಜಗಳ ನಿವೇಶನದಲ್ಲಿ ಜಿ+1 ಕಟ್ಟಡಕ್ಕೆ ಮಾತ್ರ ಅನುಮತಿ ಇದ್ದರೂ ಜಿ+4 ಅಂತಸ್ತುಗಳ ಕಟ್ಟಡ ನಿರ್ಮಿಸಲಾಗಿತ್ತು ಎಂದು ಹಿರಿಯ ಎಂಸಿಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಟ್ಟಡದ ಮಾಲೀಕ ಹರಿರಾಮ್ ಹಾಗೂ ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಮಾಲೀಕನ ಬಂಧನಕ್ಕಾಗಿ ಹಲವು ಕಡೆಗಳಲ್ಲಿ ಶೋಧ ನಡೆಸಲಾಗುತ್ತಿದೆ.



