
ಬೆಂಗಳೂರು, ಸೆ. 4: ರಾಜ್ಯದಲ್ಲಿ ಮಳೆ ಕೊರತೆ ಹಾಗೂ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಬರ ಪರಿಸ್ಥಿತಿಯನ್ನು ಎದುರಿಸುವ ಉದ್ದೇಶದಿಂದ ರಾಜ್ಯ ಸರಕಾರ ಮಹತ್ವಾಕಾಂಕ್ಷಿ ‘ಮೋಡ ಬಿತ್ತನೆ’ ಯೋಜನೆಗೆ ಶುಕ್ರವಾರ ಚಾಲನೆ ನೀಡಿದೆ. ಬೆಂಗಳೂರಿನ ಎಚ್.ಎ.ಎಲ್. ವಿಮಾನ ನಿಲ್ದಾಣದಲ್ಲಿ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಮೋಡ ಬಿತ್ತನೆಗೆ ಸಿದ್ಧಪಡಿಸಿರುವ ವಿಶೇಷ ಲಘು ವಿಮಾನಕ್ಕೆ ಚಾಲನೆ ನೀಡಿದರು.
ರಾಜ್ಯದಲ್ಲಿ ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಸೆಪ್ಟೆಂಬರ್ ಅಂತ್ಯದೊಳಗೆ ಅಗತ್ಯ ಪ್ರಮಾಣದ ನೀರು ಸಂಗ್ರಹವಾಗದಿದ್ದರೆ ಮುಂದಿನ ಜೂನ್‌ವರೆಗೂ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗುವ ಸಾಧ್ಯತೆಯಿದೆ ಎಂದು ಸಚಿವರು ಆತಂಕ ವ್ಯಕ್ತಪಡಿಸಿದರು. ರೈತರ ಹಿತ ಹಾಗೂ ನೀರಿನ ಕೊರತೆ ನೀಗಿಸುವ ಉದ್ದೇಶದಿಂದ ಮೋಡ ಬಿತ್ತನೆ ಕೈಗೊಳ್ಳಲಾಗಿದ್ದು, ಈ ಹಿಂದಿನ ಕಾರ್ಯಾಚರಣೆಯಲ್ಲಿ ಶೇ.35ರಷ್ಟು ಯಶಸ್ಸು ಕಂಡಿತ್ತು ಎಂದು ಅವರು ತಿಳಿಸಿದರು.
ಮೋಡಗಳಲ್ಲಿರುವ ತೇವಾಂಶವನ್ನು ಮಳೆಯಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ವೇಗಗೊಳಿಸುವ ವೈಜ್ಞಾನಿಕ ವಿಧಾನವೇ ಮೋಡ ಬಿತ್ತನೆ. ಮೋಡಗಳ ಸ್ವರೂಪಕ್ಕೆ ಅನುಗುಣವಾಗಿ ಸಿಲ್ವರ್ ಅಯೋಡೈಡ್ ಅಥವಾ ಸೋಡಿಯಂ ಕ್ಲೋರೈಡ್‌ನಂತಹ ಕಣಗಳನ್ನು ವಿಶೇಷ ವಿಮಾನದ ಮೂಲಕ ಮೋಡಗಳಿಗೆ ಸಿಂಪಡಿಸಲಾಗುತ್ತದೆ. ಡಾಪ್ಲರ್ ರಾಡಾರ್ ಮೂಲಕ ಸೂಕ್ತ ಮೋಡಗಳನ್ನು ಗುರುತಿಸಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಮೋಡ ಬಿತ್ತನೆಯ ಬಳಿಕ 30 ನಿಮಿಷದಿಂದ ಒಂದು ಗಂಟೆಯೊಳಗೆ ಮಳೆಯಾಗುವ ಸಾಧ್ಯತೆ ಇರುತ್ತದೆ.
ಈ ಯೋಜನೆಗೆ ಜಿಎಸ್‌ಟಿ ಹೊರತುಪಡಿಸಿ ಒಟ್ಟು 28.52 ಕೋಟಿ ರೂ. ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕರ್ನಾಟಕ ನೀರಾವರಿ ನಿಗಮ ನಿಯಮಿತ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಜಂಟಿಯಾಗಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿವೆ. ಮಳೆ ಕೊರತೆ ಇರುವ ಪ್ರದೇಶಗಳು, ಪ್ರಮುಖ ಜಲಾಶಯಗಳ ಜಲಾನಯನ ಪ್ರದೇಶಗಳು ಹಾಗೂ ಕೃಷಿ ಬಿಕ್ಕಟ್ಟು ಎದುರಿಸುತ್ತಿರುವ ಪ್ರದೇಶಗಳಲ್ಲಿ ಸೂಕ್ತ ಮೋಡಗಳು ಕಂಡುಬಂದಾಗ ಹವಾಮಾನ ದತ್ತಾಂಶದ ಆಧಾರದಲ್ಲಿ ವಿಮಾನವನ್ನು ಕಾರ್ಯಾಚರಣೆಗೆ ಕಳುಹಿಸಲಾಗುತ್ತದೆ.



