
ಬೆಂಗಳೂರು, ಸೆಪ್ಟೆಂಬರ್ 3: ಸತತ ಕುಸಿತದ ಬಳಿಕ ಚಿನ್ನದ ಬೆಲೆಯಲ್ಲಿ ಗುರುವಾರ ಮತ್ತೆ ಏರಿಕೆ ಕಂಡುಬಂದಿದ್ದು, ಚಿನ್ನ ಖರೀದಿಸಲು ಮುಂದಾಗಿರುವವರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಳೆದ ಕೆಲವು ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಚಿನ್ನದ ದರ ಇದೀಗ ಏಕಾಏಕಿ ಏರಿಕೆ ದಾಖಲಿಸಿದೆ.
ಬೆಂಗಳೂರಿನಲ್ಲಿ ಗುರುವಾರ ಬೆಳಗಿನ ವಹಿವಾಟಿನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ ಗ್ರಾಂಗೆ 333 ರೂ. ಏರಿಕೆಯಾಗಿದ್ದು, 10 ಗ್ರಾಂಗೆ 1,55,350 ರೂ. ತಲುಪಿದೆ. 22 ಕ್ಯಾರೆಟ್ ಆಭರಣ ಚಿನ್ನದ ದರ ಪ್ರತಿ ಗ್ರಾಂಗೆ 305 ರೂ. ಏರಿಕೆಯಾಗಿ 10 ಗ್ರಾಂಗೆ 1,42,400 ರೂ. ಆಗಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 249 ರೂ. ಹೆಚ್ಚಾಗಿ 10 ಗ್ರಾಂಗೆ 1,16,510 ರೂ. ತಲುಪಿದೆ.
ಮಂಗಳೂರಿನಲ್ಲಿಯೂ ಚಿನ್ನದ ದರದಲ್ಲಿ ಇದೇ ರೀತಿಯ ಏರಿಕೆ ದಾಖಲಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 15,535 ರೂ., 22 ಕ್ಯಾರೆಟ್ ಚಿನ್ನದ ಬೆಲೆ 14,240 ರೂ. ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆ 11,651 ರೂ.ಗೆ ತಲುಪಿದೆ. ಇದೇ ವೇಳೆ ಬೆಳ್ಳಿಯ ದರದಲ್ಲಿಯೂ ಏರಿಕೆ ಕಂಡುಬಂದಿದ್ದು, ಪ್ರತಿ ಕೆ.ಜಿ.ಗೆ 2,50,000 ರೂ. ಆಗಿದೆ.
ಅಮೆರಿಕದ ಆರ್ಥಿಕ ಚಟುವಟಿಕೆಯಲ್ಲಿ ಸುಧಾರಣೆ, ಉದ್ಯೋಗದಲ್ಲಿ ಸ್ವಲ್ಪ ಏರಿಕೆ ಹಾಗೂ ಹಣದುಬ್ಬರದ ಪ್ರಮಾಣದಲ್ಲಿನ ಬದಲಾವಣೆಗಳು ಚಿನ್ನ ಮತ್ತು ಬೆಳ್ಳಿ ಬೆಲೆಗಳ ಮೇಲೆ ಪರಿಣಾಮ ಬೀರಿವೆ ಎಂದು ವರದಿ ತಿಳಿಸಿದೆ. ಇತ್ತೀಚೆಗೆ ಇಳಿಕೆಯ ಹಾದಿಯಲ್ಲಿದ್ದ ಚಿನ್ನದ ದರ ಮತ್ತೆ ಏರಿಕೆಯಾಗಿರುವುದು ಮಾರುಕಟ್ಟೆಯಲ್ಲಿ ಮುಂದಿನ ದಿನಗಳ ಬೆಲೆ ಚಲನೆಯ ಬಗ್ಗೆ ಕುತೂಹಲ ಮೂಡಿಸಿದೆ.



