
ವಾಷಿಂಗ್ಟನ್, ಸೆ. 3: ಇರಾನ್ನೊಂದಿಗಿನ ಸಂಘರ್ಷ ತೀವ್ರಗೊಂಡಿರುವ ನಡುವೆಯೇ ಜಾಗತಿಕವಾಗಿ ಅತ್ಯಂತ ಮಹತ್ವದ ಜಲಮಾರ್ಗವಾಗಿರುವ ಹಾರ್ಮುಝ್ ಜಲಸಂಧಿಯ ಹೆಸರನ್ನು ‘ಟ್ರಂಪ್ ಜಲಸಂಧಿ’ ಎಂದು ಬದಲಾಯಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲಹೆ ನೀಡಿದ್ದಾರೆ. ‘ಈಗ ಅದು ಅಮೆರಿಕದ ನಿಯಂತ್ರಣದಲ್ಲಿದೆ’ ಎಂದು ಹೇಳಿರುವ ಟ್ರಂಪ್, ಹಾರ್ಮುಝ್ ಜಲಸಂಧಿಯ ಹೆಸರನ್ನು ಬದಲಾಯಿಸಬೇಕೇ ಎಂದು ತಮ್ಮ ‘ಟ್ರುತ್ ಸೋಷಿಯಲ್’ ಖಾತೆಯಲ್ಲಿ ಪ್ರಶ್ನಿಸಿದ್ದಾರೆ. ಈ ಹೇಳಿಕೆಯನ್ನು ಶ್ವೇತಭವನವೂ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದೆ.
ಹಾರ್ಮುಝ್ ಜಲಸಂಧಿಯ ಮೇಲೆ ಅಮೆರಿಕ ಸಾರ್ವಭೌಮತ್ವ ಪಡೆಯುವ ಕುರಿತು ಟ್ರಂಪ್ ಇತ್ತೀಚಿನ ವಾರಗಳಲ್ಲಿ ಪದೇಪದೇ ಹೇಳಿಕೆ ನೀಡುತ್ತಿದ್ದಾರೆ. ಜಲಸಂಧಿಯನ್ನು ‘ಹೊಸ ಅಮೆರಿಕದ ಪ್ರದೇಶ’ ಎಂದು ಬಿಂಬಿಸುವ ನಕ್ಷೆಯೊಂದನ್ನೂ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಇದೀಗ ಅದರ ಹೆಸರನ್ನೇ ‘ಟ್ರಂಪ್ ಜಲಸಂಧಿ’ ಎಂದು ಬದಲಿಸುವ ಪ್ರಸ್ತಾಪ ಮಾಡಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿಯನ್ನು ಸಂಪರ್ಕಿಸುವ ಹಾರ್ಮುಝ್ ಜಲಸಂಧಿಯು ಜಾಗತಿಕ ಇಂಧನ ಸಾಗಣೆಯ ಪ್ರಮುಖ ಮಾರ್ಗವಾಗಿದೆ. ವಿಶ್ವದ ತೈಲ ಬಳಕೆಯ ಸುಮಾರು ಐದನೇ ಒಂದು ಭಾಗಕ್ಕೆ ಸಮಾನವಾದ ತೈಲ ಸಾಗಣೆ ಈ ಮಾರ್ಗವನ್ನು ಅವಲಂಬಿಸಿದೆ ಎಂದು ವರದಿಯಾಗಿದೆ. ಇರಾನ್ನೊಂದಿಗಿನ ಸಂಘರ್ಷದ ಹಿನ್ನೆಲೆಯಲ್ಲಿ ಜಲಮಾರ್ಗದ ಸಾಗಣೆ ಸ್ಥಗಿತಗೊಂಡಿರುವುದರಿಂದ ತೈಲ ಬೆಲೆಗಳ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಭೌಗೋಳಿಕ ಸ್ಥಳಗಳ ಹೆಸರು ಬದಲಿಸುವ ವಿಚಾರದಲ್ಲಿ ಟ್ರಂಪ್ ಇತ್ತೀಚೆಗೆ ಹಲವು ಪ್ರಸ್ತಾಪಗಳನ್ನು ಮುಂದಿಟ್ಟಿದ್ದಾರೆ. 2025ರಲ್ಲಿ ಮೆಕ್ಸಿಕೊ ಕೊಲ್ಲಿಯನ್ನು ‘ಗಲ್ಫ್ ಆಫ್ ಅಮೆರಿಕಾ’ ಎಂದು ಮರುನಾಮಕರಣ ಮಾಡುವ ಆದೇಶ ಹೊರಡಿಸಿದ್ದ ಅವರು, ಇತ್ತೀಚೆಗೆ ಕೆನಡಾದ ಒಂಟಾರಿಯೊ ಸರೋವರವನ್ನು ‘ಲೇಕ್ ಅಮೆರಿಕಾ’ ಎಂದು ಮರುನಾಮಕರಣ ಮಾಡುವಂತೆ ಆದೇಶಿಸಿದ್ದರು. ಇದೀಗ ಹಾರ್ಮುಝ್ ಜಲಸಂಧಿಗೆ ತಮ್ಮ ಹೆಸರಿಡುವ ಪ್ರಸ್ತಾಪವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.



