
ಹೊಸದಿಲ್ಲಿ, ಆಗಸ್ಟ್ 08, 2026: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರ ಕೆನಡಾ ಪ್ರವೇಶಕ್ಕೆ ತಡೆ ಒಡ್ಡುವಂತೆ ಆಗ್ರಹಿಸಿ ಕೆನಡಾದ ನಾಗರಿಕ ಸಮಾಜ, ಮಾನವ ಹಕ್ಕು, ಕಾರ್ಮಿಕ ಮತ್ತು ಧಾರ್ಮಿಕ ಸಂಘಟನೆಗಳು ಸೇರಿದಂತೆ 40ಕ್ಕೂ ಅಧಿಕ ಸಂಘ-ಸಂಸ್ಥೆಗಳು ಕೆನಡಾ ಸರ್ಕಾರಕ್ಕೆ ಜಂಟಿ ಪತ್ರ ಬರೆದಿವೆ. ಜಾಗತಿಕ ಮಟ್ಟದಲ್ಲಿ ಆರೆಸ್ಸೆಸ್ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ ಮೋಹನ್ ಭಾಗವತ್ ಅವರು ಆಗಸ್ಟ್ 31 ರಿಂದ ಸೆಪ್ಟೆಂಬರ್ 1 ರವರೆಗೆ ಕೆನಡಾಕ್ಕೆ ಭೇಟಿ ನೀಡಲು ನಿರ್ಧರಿಸಿದ್ದು, ಇದು ಅವರ ಮೊದಲ ಕೆನಡಾ ಪ್ರವಾಸವಾಗಿದೆ. ಆದರೆ ಈ ಭೇಟಿಯು ಕೆನಡಾದಲ್ಲಿರುವ ವಿವಿಧ ಸಮುದಾಯಗಳಲ್ಲಿ ತೀವ್ರ ಕಳವಳವನ್ನುಂಟು ಮಾಡಿದೆ.
ಕೆನಡಾದ ಸಾರ್ವಜನಿಕ ಸುರಕ್ಷತಾ ಸಚಿವ ಗ್ಯಾರಿ ಆನಂದಸಂಗರಿ ಅವರಿಗೆ ಈ ಕುರಿತು ಸುದೀರ್ಘ ಪತ್ರ ಬರೆಯಲಾಗಿದ್ದು, ಮೋಹನ್ ಭಾಗವತ್ ಅವರ ಆಗಮನವು ಕೆನಡಾದ ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರಬಹುದು ಎಂದು ಎಚ್ಚರಿಸಲಾಗಿದೆ. ಆರೆಸ್ಸೆಸ್ ಸಂಸ್ಥೆಯು ಧಾರ್ಮಿಕ ಬಹುಸಂಖ್ಯಾತವಾದ, ಬೆದರಿಕೆ ಹಾಗೂ ಗಡಿಯಾಚೆಗಿನ ದಮನಕಾರಿ ಚಟುವಟಿಕೆಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ಸಂಘಟನೆಗಳು ಪತ್ರದಲ್ಲಿ ಆರೋಪಿಸಿವೆ. ಸಾಮಾಜಿಕ ಕಾರ್ಯಕರ್ತರು, ಶಿಕ್ಷಣ ತಜ್ಞರು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರಿಗೆ ಆರೆಸ್ಸೆಸ್ ಸಂಬಂಧಿತ ಜಾಲಗಳು ಕಿರುಕುಳ ನೀಡುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ, ಕೆನಡಾದ ಕಾನೂನುಗಳ ಅಡಿಯಲ್ಲಿ ಭಾಗವತ್ ಅವರ ಭೇಟಿಯನ್ನು ಪರಿಶೀಲಿಸಬೇಕೆಂದು ಒತ್ತಾಯಿಸಲಾಗಿದೆ.
ಈ ಜಂಟಿ ಮನವಿಗೆ ಕೆನಡಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ & ಡೆಮಾಕ್ರಸಿ ಇನ್ ಇಂಡಿಯಾ, ಕೆನಡಿಯನ್ ಕೌನ್ಸಿಲ್ ಆಫ್ ಇಂಡಿಯನ್ ಮುಸ್ಲಿಮ್ಸ್, ಕೆನಡಿಯನ್ಸ್ ಫಾರ್ ಇಂಡಿಯನ್ ಡೆಮಾಕ್ರಸಿ, ಸೌತ್ ಏಷ್ಯನ್ ದಲಿತ್ ಆದಿವಾಸಿ ನೆಟ್ವರ್ಕ್, ವರ್ಲ್ಡ್ ಸಿಖ್ ಆರ್ಗನೈಸೇಶನ್, ಕೆನಡಿಯನ್ ಕೌನ್ಸಿಲ್ ಆಫ್ ಮುಸ್ಲಿಂ ವಿಮೆನ್, ಇಂಡಿಪೆಂಡೆಂಟ್ ಜ್ಯೂಯಿಷ್ ವಾಯ್ಸಸ್ ಕೆನಡಾ, ಜಸ್ಟ್ ಪೀಸ್ ಅಡ್ವೊಕೇಟ್ಸ್, ಫೆಡರೇಷನ್ ಡೆಸ್ ಫೆಮ್ಸ್ ಡು ಕ್ವಿಬೆಕ್, ಡಾ. ಅಂಬೇಡ್ಕರ್ ಇಂಟರ್ನ್ಯಾಷನಲ್ ಮಿಷನ್ ಮತ್ತು ಏಷ್ಯನ್ ಕೆನಡಿಯನ್ ಲೇಬರ್ ಅಲಯನ್ಸ್ ಸೇರಿದಂತೆ ಪ್ರಮುಖ 40 ಸಂಸ್ಥೆಗಳು ಒಟ್ಟಾಗಿ ಸಹಿ ಹಾಕಿವೆ.
ಬಲಪಂಥೀಯ ತೀವ್ರವಾದ, ದ್ವೇಷ ಭಾಷಣ ಮತ್ತು ವಿದೇಶಿ ಬೆದರಿಕೆಗಳಿಂದ ಕೆನಡಾದ ಸಮುದಾಯಗಳನ್ನು ರಕ್ಷಿಸಲು ಕೆನಡಾ ಸರ್ಕಾರವು ತನ್ನ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಪತ್ರದಲ್ಲಿ ಸರ್ಕಾರವನ್ನು ಕೋರಲಾಗಿದೆ. ಮೋಹನ್ ಭಾಗವತ್ ಅವರಿಗೆ ಕೆನಡಾ ಪ್ರವೇಶಕ್ಕೆ ಅವಕಾಶ ನೀಡಿದರೆ, ಅದು ದೇಶದಲ್ಲಿರುವ ಮುಸ್ಲಿಮರು, ಸಿಖ್ಖರು, ಕ್ರೈಸ್ತರು, ಯಹೂದಿಗಳು ಹಾಗೂ ದಲಿತರು ಸೇರಿದಂತೆ ದುರ್ಬಲ ಅಲ್ಪಸಂಖ್ಯಾತ ಸಮುದಾಯಗಳಿಗೆ ನೇರ ಬೆದರಿಕೆಯಾಗಲಿದೆ ಎಂದು ಸಂಘಟನೆಗಳು ಎಚ್ಚರಿಕೆ ನೀಡಿವೆ.



