
: ಭೋಪಾಲ್, ಆಗಸ್ಟ್ ೦೮, ೨೦೨೬: ಮಧ್ಯಪ್ರದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸೈಬರ್ ಹಾಗೂ ಕ್ರಿಪ್ಟೋಕರೆನ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿಯ ಸ್ಥಳೀಯ ನಾಯಕ ಹಾಗೂ ಶಾಜಾಪುರ ಜಿಲ್ಲಾ ಪಂಚಾಯತ್ ಸದಸ್ಯ ಜಗದೀಶ್ ಕುಮಾರ್ ಮಾಲ್ವಿಯಾ ಎಂಬಾತನನ್ನು ರಾಜ್ಯ ಸೈಬರ್ ಪೊಲೀಸರು ಬಂಧಿಸಿದ್ದಾರೆ. “ಹಲೋ, ಇದು ದಿವ್ಯ ಮಾತನಾಡುತ್ತಿದ್ದೇನೆ” ಎಂಬ ಸರಳ ವಾಟ್ಸಾಪ್ ಸಂದೇಶದೊಂದಿಗೆ ಆರಂಭವಾದ ಈ ಸೈಬರ್ ಜಾಲವು ಒಟ್ಟು ೨೧.೦೬ ಕೋಟಿ ರೂಪಾಯಿಗಳ ಬೃಹತ್ ಅಕ್ರಮ ಹಣ ವರ್ಗಾವಣೆಗೆ ಕಾರಣವಾಗಿದೆ. ಸೈಬರ್ ವಂಚನೆಯ ಹಣವನ್ನು ಕಾನೂನುಬಾಹಿರವಾಗಿ ವರ್ಗಾಯಿಸಲು ತನ್ನ ಸಂಸ್ಥೆಯ ಬ್ಯಾಂಕ್ ಖಾತೆಯನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಮಾಲ್ವಿಯಾ ಅವರನ್ನು ತನಿಖಾಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಬೃಹತ್ ವಂಚನೆ ಜಾಲವು ೨೦೨೫ರ ಡಿಸೆಂಬರ್‌ನಲ್ಲಿ ಗ್ವಾಲಿಯರ್ ಮೂಲದ ೭೦ ವರ್ಷದ ಹಿರಿಯ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಅಶೋಕ್ ವಿಜಯವರ್ಗಿಯಾ ಅವರಿಗೆ ಬಂದ ವಾಟ್ಸಾಪ್ ಸಂದೇಶದ ಮೂಲಕ ಆರಂಭವಾಗಿತ್ತು. ನಕಲಿ ಯುಎಸ್‌ಡಿಟಿ (USDT) ಕ್ರಿಪ್ಟೋಕರೆನ್ಸಿ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಅತಿ ಕಡಿಮೆ ಅವಧಿಯಲ್ಲಿ ದುಪ್ಪಟ್ಟು ಲಾಭ ಗಳಿಸಿಕೊಡುವುದಾಗಿ ವಂಚಕರು ನಂಬಿಸಿದ್ದರು. ಸಂತ್ರಸ್ತರಿಗೆ ಆರಂಭದಲ್ಲಿ ಸಣ್ಣ ಮೊತ್ತವನ್ನು ಹಿಂಪಡೆಯಲು ಅವಕಾಶ ನೀಡಿ ವಿಶ್ವಾಸ ಗಿಟ್ಟಿಸಿಕೊಂಡ ವಂಚಕರು, ಬಳಿಕ ನಕಲಿ ಪೋರ್ಟಲ್ ಒಂದರಲ್ಲಿ ಅವರ ಹೂಡಿಕೆಯು ೩೩ ಕೋಟಿ ರೂಪಾಯಿಗೂ ಅಧಿಕ ಲಾಭ ಗಳಿಸಿದೆ ಎಂದು ತೋರಿಸಿದ್ದರು. ಆದರೆ ಆ ಹಣವನ್ನು ಹಿಂಪಡೆಯಲು ಹೋದಾಗ ಆದಾಯ ತೆರಿಗೆ, ರಿಸ್ಕ್ ಮಾರ್ಜಿನ್ ಹಾಗೂ ನಾನಾ ಶುಲ್ಕಗಳ ಹೆಸರಿನಲ್ಲಿ ಹಂತ-ಹಂತವಾಗಿ ೭೬ ಬ್ಯಾಂಕ್ ಖಾತೆಗಳ ಮೂಲಕ ಒಟ್ಟು ೧೦೬ ವಹಿವಾಟುಗಳಲ್ಲಿ ೨೧ ಕೋಟಿಗೂ ಹೆಚ್ಚು ಹಣವನ್ನು ಪೀಡಿಸಿ ಪಡಕೊಳ್ಳಲಾಗಿತ್ತು.
ಈ ಸೈಬರ್ ಅಪರಾಧದ ಡಿಜಿಟಲ್ ಹಣದ ಜಾಡನ್ನು ಪರಿಶೀಲಿಸಿದಾಗ, ವಂಚನೆಗೊಳಗಾದ ಹಣದ ಪೈಕಿ ಮೊದಲ ಹಂತದ ವರ್ಗಾವಣೆಯಲ್ಲಿ ಬಂಧಿತ ಬಿಜೆಪಿ ನಾಯಕ ಜಗದೀಶ್ ಮಾಲ್ವಿಯಾ ಅವರಿಗೆ ಸೇರಿದ ಸಂಸ್ಥೆಯ ಖಾತೆಗೆ ಸುಮಾರು ೭೭ ಲಕ್ಷ ರೂ. ತಲುಪಿರುವುದು ಪತ್ತೆಯಾಗಿದೆ. ಇದರಲ್ಲಿ ೫೦ ಲಕ್ಷ ರೂಪಾಯಿ ನೇರವಾಗಿ ಈ ಹಗರಣಕ್ಕೆ ಸಂಬಂಧಿಸಿದ್ದು, ಶೇಕಡಾ ೨ ರಷ್ಟು ಕಮಿಷನ್ ಆಸೆಗೆ ಬಿದ್ದು ಈ ಅಕ್ರಮ ಹಣದ ಹರಿವಿಗೆ ತಾನು ನೆರವಾಗಿದ್ದಾಗಿ ಮಾಲ್ವಿಯಾ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ತನ್ನ ಖಾತೆಯಲ್ಲಿ ೨.೫ ಕೋಟಿ ರೂ.ಗಳಿಗೂ ಅಧಿಕ ಅನುಮಾನಾಸ್ಪದ ವಹಿವಾಟು ನಡೆಸಿದ್ದ ಈತ, ಸೈಬರ್ ಅಪರಾಧದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದಲ್ಲದೆ, ತನಿಖೆಯಿಂದ ತಪ್ಪಿಸಿಕೊಳ್ಳಲು ಕಳೆದ ಜುಲೈನಲ್ಲಿ ಬ್ಯಾಂಕಾಕ್‌ಗೂ ಪ್ರವಾಸ ಕೈಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯ ಸೈಬರ್ ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ವಂಚಕರು ಜಪ್ತಿಯಿಂದ ತಪ್ಪಿಸಿಕೊಳ್ಳಲು ಈ ಹಣವನ್ನು ಒಂದೇ ಖಾತೆಯಲ್ಲಿ ಇಡದೆ ೧೫ ವಿವಿಧ ಹಂತಗಳಲ್ಲಿ ವಿಭಜಿಸಿ ೨೦,೦೦೦ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳ ಜಾಲದ ಮೂಲಕ ಚಲಾಯಿಸಿದ್ದಾರೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಬ್ಯಾಂಕಿಂಗ್ ಖಾತೆಗಳ ಮೂಲಕವೇ ಸುಮಾರು ಶೇ. ೩೫ರಷ್ಟು ಹಣ ರವಾನೆಯಾಗಿರುವುದು ಕಂಡುಬಂದಿದೆ. ಪ್ರಸ್ತುತ ತನಿಖಾ ಸಂಸ್ಥೆಗಳು ೨ ಕೋಟಿ ರೂಪಾಯಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಇಡೀ ದೇಶವ್ಯಾಪಿ ಹರಡಿರುವ ‘ಮ್ಯೂಲ್ ಅಕೌಂಟ್’ಗಳ ಶಂಕಿತ ಜಾಲ ಹಾಗೂ ಅಂತಾರಾಷ್ಟ್ರೀಯ ಆಪರೇಟರ್‌ಗಳ ವಿರುದ್ಧ ತನಿಖೆಯನ್ನು ತೀವ್ರಗೊಳಿಸಿವೆ.



