
ಅಹಮದಾಬಾದ್, 07 ಆಗಸ್ಟ್ 2026: ಬಡತನ ಮತ್ತು ಅತಿಯಾದ ಹಸಿವಿನಿಂದಾಗಿ ತನ್ನ ಎರಡು ವರ್ಷದ ಹೆಣ್ಣುಮಗುವನ್ನು ಹೊಡೆದು ಕೊಂದ ಆರೋಪ ಎದುರಿಸುತ್ತಿದ್ದ ಮಹಿಳೆಗೆ ಗುಜರಾತ್ ಹೈಕೋರ್ಟ್ ಸಾಮಾನ್ಯ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಹಸ್ಮುಖ್ ಡಿ. ಸುತಾರ್ ಅವರಿದ್ದ ಏಕಸದಸ್ಯ ಪೀಠವು ಈ ಪ್ರಕರಣವನ್ನು ಅತ್ಯಂತ “ಹೃದಯವಿದ್ರಾವಕ” ಎಂದು ಕಳವಳ ವ್ಯಕ್ತಪಡಿಸಿದ್ದು, ಇದು ಕೇವಲ ಒಬ್ಬ ವ್ಯಕ್ತಿಯ ದುರಂತವಲ್ಲ, ಬದಲಿಗೆ ಸಮಾಜದ ವ್ಯವಸ್ಥೆಯ ದೊಡ್ಡ ವೈಫಲ್ಯ ಹಾಗೂ ಸಾಮಾಜಿಕ ನ್ಯಾಯ ಮತ್ತು ನೈತಿಕತೆಯ ಮೇಲಿನ ಪ್ರಮುಖ ಪ್ರಶ್ನೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಮಾರ್ಚ್ 19ರಂದು ಆಹಾರಕ್ಕಾಗಿ ಪೀಡಿಸುತ್ತಿದ್ದ ತನ್ನ ಎರಡು ವರ್ಷದ ಮಗುವಿನ ಮೇಲಿನ ಆಕ್ರೋಶದಿಂದ ಆರೋಪಿ ತಾಯಿ ಲಖಿಬೆನ್ ಸೋಳಂಕಿ ಮಗುವನ್ನು ಮನಬಂದಂತೆ ಥಳಿಸಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಮಗು ಮೃತಪಟ್ಟಿತ್ತು. ಈ ಪ್ರಕರಣಕ್ಕೆ ಆರೋಪಿಯ ಮೂರು ವರ್ಷದ ಹಿರಿಯ ಪುತ್ರಿ ಏಕೈಕ ಸಾಕ್ಷಿಯಾಗಿದ್ದಾಳೆ. ತಾಯಿಯ ಮಡಿಲು ಮಗುವಿನ ಪಾಲಿಗೆ ಸ್ವರ್ಗವಾಗಿದ್ದು, ಮಗುವನ್ನು ಪೋಷಿಸುವುದು ತಾಯಿಯ ಧರ್ಮ ಮತ್ತು ಕರ್ತವ್ಯವಾಗಿದ್ದರೂ, ಹಸಿವು ತಾಯಿಯೊಬ್ಬಳನ್ನು ಇಂತಹ ಅತಿರೇಕದ ಕ್ರಮಕ್ಕೆ ದೂಡಿದೆ ಎಂದು ನ್ಯಾಯಪೀಠವು ನೋವಿನಿಂದ ಗಮನಿಸಿದೆ.
ವಿಚಾರಣೆ ವೇಳೆ ನ್ಯಾಯಾಲಯವು, “ಯಾರೂ ಹುಟ್ಟುತ್ತಲೇ ಅಪರಾಧಿಗಳಾಗುವುದಿಲ್ಲ, ಬದಲಿಗೆ ಅಪರಾಧಿಗಳನ್ನು ಸೃಷ್ಟಿಸಲಾಗುತ್ತದೆ” ಎಂಬ ನಾಣ್ಣುಡಿಯನ್ನು ಉಲ್ಲೇಖಿಸಿದೆ. ಈ ದುರಂತವು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿನ ವೈಫಲ್ಯವನ್ನು ಹಾಗೂ ಬಡ ಮತ್ತು ದುರ್ಬಲ ಕುಟುಂಬಗಳನ್ನು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸುವಲ್ಲಿ ಸರ್ಕಾರ ಮತ್ತು ಸಮಾಜದ ಸಾಮೂಹಿಕ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ನ್ಯಾಯಾಲಯ ಖಾರವಾಗಿ ಆಕ್ಷೇಪಿಸಿದೆ.
ಈ ಘಟನೆಯ ಭೀಕರತೆಯನ್ನು ತೀವ್ರ ಹಸಿವಿನ ಮಾನಸಿಕ ಭೀಕರತೆ ಹಾಗೂ ಸಾಮಾಜಿಕ ಕುಸಿತವನ್ನು ಬಿಂಬಿಸುವ ಪನ್ನಾಲಾಲ್ ಪಟೇಲ್ ಅವರ ಗುಜರಾತಿ ಕಾದಂಬರಿ ‘ಮಾನ್ವಿನಿ ಭವಾಯಿ’ ಹಾಗೂ ವಿಕ್ಟರ್ ಹ್ಯೂಗೋ ಅವರ ಫ್ರೆಂಚ್ ಕಾದಂಬರಿ ‘ಲೆಸ್ ಮಿಸೆರಬಲ್ಸ್’ ಕೃತಿಗಳಿಗೆ ನ್ಯಾಯಪೀಠ ಹೋಲಿಸಿದೆ. ಪ್ರತಿಯೊಬ್ಬ ವ್ಯಕ್ತಿಯೂ ಆಹಾರ, ವಸತಿ, ಆರೋಗ್ಯ ಸೇವೆ ಮತ್ತು ಘನತೆಯಂತಹ ಮೂಲಭೂತ ಅವಶ್ಯಕತೆಗಳನ್ನು ಪಡೆದಾಗ ಮಾತ್ರ ನಿಜವಾದ ಸಾಮಾಜಿಕ ನ್ಯಾಯದ ತತ್ವವನ್ನು ಅನ್ವಯಿಸಲು ಸಾಧ್ಯ ಎಂದು ಸ್ಪಷ್ಟಪಡಿಸಿ ಹೈಕೋರ್ಟ್ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.



