
ಬೆಂಗಳೂರು, 5 ಆಗಸ್ಟ್ 2026: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು ಮತ್ತು ದಾರಿತಪ್ಪಿಸುವಂತದ್ದು ಎಂದು ಮಾಜಿ ಸಚಿವ ಹಾಗೂ ಶಾಸಕ ಬಿ. ಆರ್. ಪಾಟೀಲ್ ಅವರು ಸ್ಪಷ್ಟಪಡಿಸಿದ್ದಾರೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ರೀತಿಯ ಅಪಪ್ರಚಾರ ನಡೆಯುತ್ತಿದ್ದು, ಸಾರ್ವಜನಿಕರು ಹಾಗೂ ಬೆಂಬಲಿಗರು ಇಂತಹ ಯಾವುದೇ ವದಂತಿಗಳನ್ನು ನಂಬಬಾರದು ಎಂದು ಅವರು ಕೋರಿದ್ದಾರೆ.
ದಿನಾಂಕ 05.06.2026ರಂದು ತಾವು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿರುವ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಶಾಸಕ ಹುದ್ದೆಯು ಕೇವಲ ಅಧಿಕಾರದ ಹುದ್ದೆಯಲ್ಲ, ಬದಲಿಗೆ ಕ್ಷೇತ್ರದ ಜನತೆ ತಮ್ಮ ಮೇಲಿಟ್ಟಿರುವ ನಂಬಿಕೆ ಮತ್ತು ನೀಡಿದ ಮಹತ್ವದ ಜವಾಬ್ದಾರಿಯ ಸಂಕೇತವಾಗಿದೆ. ಜನ ನೀಡಿದ ಜನಾದೇಶಕ್ಕೆ ಧಕ್ಕೆ ತರುವ ಅಥವಾ ದ್ರೋಹ ಬಗೆಯುವ ಆಲೋಚನೆ ತಮಗಿಲ್ಲ ಹಾಗೂ ಕ್ಷೇತ್ರದ ಜನರ ಆಶಯ ಈಡೇರಿಸುವುದೇ ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.
ಸಚಿವ ಸ್ಥಾನ ದೊರಕದಿರುವ ಕುರಿತು ಮುಕ್ತವಾಗಿ ಮಾತನಾಡಿದ ಅವರು, ಮಂತ್ರಿ ಪದವಿ ಸಿಗದಿರುವುದು ಸಹಜವಾಗಿ ಮನಸ್ಸಿಗೆ ನೋವು ಮತ್ತು ಅಸಮಾಧಾನ ಉಂಟುಮಾಡಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ ತಮ್ಮ ಐದು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಹುದ್ದೆಗಿಂತ ಪಕ್ಷ, ವೈಯಕ್ತಿಕ ಹಿತಾಸಕ್ತಿಗಿಂತ ತತ್ವ, ಸಿದ್ಧಾಂತ ಮತ್ತು ಸಮಾಜವಾದಿ ಮೌಲ್ಯಗಳೇ ತಮಗೆ ಎಂದಿಗೂ ಪ್ರಮುಖವಾಗಿವೆ. ಸಚಿವ ಸ್ಥಾನ ಇರಲಿ ಅಥವಾ ಇಲ್ಲದಿರಲಿ, ತಾವು ಸದಾ ಕ್ಷೇತ್ರದ ಜನರ ಸೇವೆಗೆ ಬದ್ಧರಾಗಿರುವುದಾಗಿ ಪುನರುಚ್ಛರಿಸಿದ್ದಾರೆ.
ಪಕ್ಷದ ಮೇಲಿನ ತಮ್ಮ ನಿಷ್ಠೆ ಮತ್ತು ಸಾಮಾಜಿಕ ನ್ಯಾಯದ ಪರವಾದ ಬದ್ಧತೆ ಎಂದಿಗೂ ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಶಾಸಕರು, ಶಾಸಕ ಸ್ಥಾನದ ರಾಜೀನಾಮೆ ಕುರಿತ ಸುಳ್ಳು ಸುದ್ದಿಗಳನ್ನು ಯಾರೂ ನಂಬಬಾರದು ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಮಾಧ್ಯಮಗಳು ಸಹ ಯಾವುದೇ ಸುದ್ದಿ ಬಿತ್ತರಿಸುವ ಮುನ್ನ ವಾಸ್ತವಾಂಶಗಳನ್ನು ಸರಿಯಾಗಿ ಪರಿಶೀಲಿಸಿ, ಜನತೆಗೆ ನಿಖರ ಹಾಗೂ ಸತ್ಯ ಮಾಹಿತಿಯನ್ನು ತಲುಪಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.



