
ಹೊಸದೆಹಲಿ, ಆಗಸ್ಟ್ ೦೫: ದೇಶದಲ್ಲಿ ʼಥರ್ಡ್ ಪಾರ್ಟಿʼ (ಮೂರನೇ ವ್ಯಕ್ತಿ) ವಿಮೆ ಇಲ್ಲದೆ ಚಲಿಸುವ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ವಿಮೆ ಹೊಂದಿರದ ವಾಹನಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳುವವರೆಗೆ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ (ಪೆಟ್ರೋಲ್/ಡೀಸೆಲ್) ನೀಡದಂತೆ ತಡೆಯುವ ಪ್ರಾಯೋಗಿಕ ಯೋಜನೆಯೊಂದನ್ನು (ಪೈಲಟ್ ಪ್ರಾಜೆಕ್ಟ್) ತಕ್ಷಣವೇ ರೂಪಿಸಬೇಕೆಂದು ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠವು ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಹಣಕಾಸು ಸ್ಥಾಯಿ ಸಮಿತಿಯ 2024–25ರ ವರದಿಯನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಭಾರತದ ರಸ್ತೆಗಳಲ್ಲಿ ಸಂಚರಿಸುತ್ತಿರುವ ಒಟ್ಟು ವಾಹನಗಳ ಪೈಕಿ ಶೇಕಡಾ 56 ರಷ್ಟು ವಾಹನಗಳು ಯಾವುದೇ ಥರ್ಡ್ ಪಾರ್ಟಿ ವಿಮೆ ಇಲ್ಲದೆ ಓಡಾಡುತ್ತಿವೆ ಎಂದು ಹೇಳಿದೆ. ಈ ಗಂಭೀರ ಸಮಸ್ಯೆಯನ್ನು ತಡೆಯಲು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪರಸ್ಪರ ಚರ್ಚಿಸಿ, ಪೆಟ್ರೋಲ್ ಪಂಪ್ಗಳಲ್ಲಿ ವಾಹನದ ವಿಮೆ ಪರಿಶೀಲಿಸಿ ಇಂಧನ ನೀಡುವ ಯೋಜನೆಯನ್ನು ಜಾರಿಗೆ ತರಲು ಸೂಚಿಸಲಾಗಿದೆ.
ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ನಿರಾಕರಿಸುವ ಈ ಕ್ರಮದಿಂದಾಗಿ ವಿಮೆ ಇಲ್ಲದ ಹಾಗೂ ನೋಂದಣಿಯಾಗದ ವಾಹನಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ, ರಸ್ತೆ ಅಪಘಾತಗಳು ಸಂಭವಿಸಿದಾಗ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗಲು ಮತ್ತು ವಾಹನ ಮಾಲೀಕರು ಜವಾಬ್ದಾರಿಯಿಂದ ಕಡ್ಡಾಯವಾಗಿ ವಿಮೆ ನವೀಕರಿಸಿಕೊಳ್ಳಲು ಈ ನಿಯಮವು ಪ್ರೇರೇಪಿಸುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.
ಈ ಹಿಂದೆ 2018ರಲ್ಲಿಯೇ ಸುಪ್ರೀಂ ಕೋರ್ಟ್, ಹೊಸದಾಗಿ ಖರೀದಿಸುವ ಕಾರುಗಳಿಗೆ ಮೂರು ವರ್ಷ ಮತ್ತು ದ್ವಿಚಕ್ರ ವಾಹನಗಳಿಗೆ ಐದು ವರ್ಷಗಳ ಕಡ್ಡಾಯ ಥರ್ಡ್ ಪಾರ್ಟಿ ವಿಮೆ ಮಾಡಿಸಬೇಕೆಂದು ಆದೇಶಿಸಿತ್ತು. ಆದರೆ ಆ ಆದೇಶ ಬಂದು ಎಂಟು ವರ್ಷಗಳು ಕಳೆದರೂ ದೇಶದಲ್ಲಿ ಲಕ್ಷಾಂತರ ವಾಹನಗಳು ವಿಮೆ ಇಲ್ಲದೆಯೇ ಸಂಚರಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈಗ ಈ ಕಠಿಣ ಕ್ರಮಕ್ಕೆ ಮುಂದಾಗಿದೆ.



