
ಬೆಳ್ತಂಗಡಿ, ಆಗಸ್ಟ್ 04, 2026: ಉಜಿರೆ-ಬೆಳಾಲು ಕ್ರಾಸ್ ಬಳಿ ದ್ವಿಚಕ್ರ ವಾಹನಕ್ಕೆ ಆಟೋ ರಿಕ್ಷಾ ಡಿಕ್ಕಿ ಹೊಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ದುಡುಕು ಹಾಗೂ ನಿರ್ಲಕ್ಷ್ಯದ ಚಾಲನೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಆಟೋ ಚಾಲಕನಿಗೆ ಬೆಳ್ತಂಗಡಿ ನ್ಯಾಯಾಲಯವು 6 ತಿಂಗಳ ಕಾರಾಗೃಹ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ವಿವರಗಳ ಪ್ರಕಾರ, ಶ್ರೀನಿವಾಸ ಎಂಬುವರು ತಮ್ಮ ಸ್ಕೂಟಿಯಲ್ಲಿ ಗಿರಿಜಾ ಹಾಗೂ ಗಣೇಶ್ ಅವರನ್ನು ಸಹ ಸವಾರರನ್ನಾಗಿ ಕೂರಿಸಿಕೊಂಡು ಉಜಿರೆಯಿಂದ ಧರ್ಮಸ್ಥಳದ ಕಡೆಗೆ ಪ್ರಯಾಣಿಸುತ್ತಿದ್ದರು. ರಾತ್ರಿ ವೇಳೆ ಉಜಿರೆ-ಬೆಳಾಲು ಕ್ರಾಸ್ ಬಳಿ ತಲುಪಿದಾಗ, ಶ್ರೀನಿವಾಸ ಅವರು ಬೆಳಾಲು ರಸ್ತೆಗೆ ತಿರುಗಲು ಸ್ಕೂಟಿಯ ಬಲ ಬದಿಯ ಇಂಡಿಕೇಟರ್ ಹಾಕಿದ್ದರು. ಈ ವೇಳೆ ಅದೇ ದಿಕ್ಕಿನಲ್ಲಿ ಹಿಂದಿನಿಂದ ಬಂದ ಆಟೋ ರಿಕ್ಷಾವನ್ನು ಅದರ ಚಾಲಕ ಹಸೈನ್ ಎಂಬಾತ ಅತ್ಯಂತ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದನು.
ಈ ಅಪಘಾತದ ಪರಿಣಾಮವಾಗಿ ಸ್ಕೂಟಿಯಲ್ಲಿದ್ದ ಸವಾರ ಶ್ರೀನಿವಾಸ ಹಾಗೂ ಸಹ ಸವಾರರಾದ ಗಿರಿಜಾ ಮತ್ತು ಗಣೇಶ್ ಅವರು ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡ ಪೊಲೀಸರು, ಚಾಲಕ ಹಸೈನ್ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಿದ್ದರು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಬೆಳ್ತಂಗಡಿ ನ್ಯಾಯಾಲಯವು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ಆರೋಪಿ ಹಸೈನ್ ಮೇಲಿನ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿತು. ನ್ಯಾಯಾಲಯವು ಆರೋಪಿಗೆ 6 ತಿಂಗಳ ಜೈಲು ಶಿಕ್ಷೆ ಹಾಗೂ ₹10,000 ದಂಡ ವಿಧಿಸಿ ಆದೇಶಿಸಿದ್ದು, ಚಾಲನೆಯಲ್ಲಿ ವಹಿಸಬೇಕಾದ ಜಾಗರೂಕತೆ ಮತ್ತು ರಸ್ತೆ ಸುರಕ್ಷತೆಯ ಮಹತ್ವವನ್ನು ಈ ತೀರ್ಪು ಎತ್ತಿಹಿಡಿದಿದೆ.



