News

ವಾಂಗ್ಚುಕ್ ಜೀವಕ್ಕೆ ಅಪಾಯವಾದರೆ ಎಲ್ಲರೂ ಹೊಣೆ: ಪತ್ನಿ ಗೀತಾಂಜಲಿ ಜೆ. ಆ್ಯಂಗ್ಮೊ ಎಚ್ಚರಿಕೆ

ಹೊಸದಿಲ್ಲಿ, ಜುಲೈ 18, 2026: ನೀಟ್ ಪರೀಕ್ಷಾ ಅಕ್ರಮದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಸಿದ್ಧ ಶಿಕ್ಷಣ ತಜ್ಞ ಹಾಗೂ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನು ದೆಹಲಿ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿರುವುದನ್ನು ಅವರ ಪತ್ನಿ ಗೀತಾಂಜಲಿ ಜೆ. ಆ್ಯಂಗ್ಮೊ ತೀವ್ರವಾಗಿ ಆಕ್ಷೇಪಿಸಿದ್ದಾರೆ. ದೆಹಲಿ ಹೈಕೋರ್ಟ್ ವಾಂಗ್ಚುಕ್ ಅವರ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸಲು ಮಾತ್ರ ಸೂಚಿಸಿತ್ತೇ ವಿನಃ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸೇರಿಸಲು ಆದೇಶಿಸಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
​ತಮ್ಮ ಪತಿಯ ಆರೋಗ್ಯದ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಗೀತಾಂಜಲಿ ಅವರು, ಕಳೆದ 20 ದಿನಗಳಿಂದ ಸೋನಂ ವಾಂಗ್ಚುಕ್ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಿರುವ ವೈದ್ಯರ ತಂಡ, ಅವರ ಕುಟುಂಬ ಹಾಗೂ ವೈಯಕ್ತಿಕವಾಗಿ ತಮ್ಮ ಲಿಖಿತ ಅಥವಾ ಮೌಖಿಕ ಸಮ್ಮತಿ ಇಲ್ಲದೆ ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆಯನ್ನು ನೀಡಬಾರದು ಎಂದು ಕಟ್ಟುನಿಟ್ಟಿನ ಒತ್ತಾಯ ಮಾಡಿದ್ದಾರೆ. ಒಂದು ವೇಳೆ ತಮ್ಮ ಅನುಮತಿಯಿಲ್ಲದೆ ಬಲವಂತದ ಚಿಕಿತ್ಸೆ ನೀಡಲು ಮುಂದಾದರೆ ಅಥವಾ ವಾಂಗ್ಚುಕ್ ಅವರ ಜೀವಕ್ಕೆ ಯಾವುದೇ ತೊಂದರೆಯುಂಟಾದರೆ ಅದಕ್ಕೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಮತ್ತು ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಅವರು ಗಂಭೀರ ಎಚ್ಚರಿಕೆ ನೀಡಿದ್ದಾರೆ.
​ಭಾರತೀಯ ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ನಾಗರಿಕರಿಗೆ ನೀಡಿರುವ ಮೂಲಭೂತ ಹಕ್ಕುಗಳನ್ನು ಉಲ್ಲೇಖಿಸಿದ ಗೀತಾಂಜಲಿ, ವ್ಯಕ್ತಿಯೊಬ್ಬನ ಜೀವ ಮತ್ತು ಸ್ವಾತಂತ್ರ್ಯ ಅತ್ಯಂತ ಅಮೂಲ್ಯವಾಗಿದ್ದು, ನ್ಯಾಯಾಲಯವು ಕೇವಲ ನಿಯಮಿತ ತಪಾಸಣೆಗೆ ಅನುಮತಿ ನೀಡಿದೆ. ಪ್ರಸ್ತುತ ಸೋನಂ ವಾಂಗ್ಚುಕ್ ಅವರನ್ನು ಆಸ್ಪತ್ರೆಯ ವೈದ್ಯರ ನಿಗಾವಣೆಯಲ್ಲಿ ಇರಿಸಲಾಗಿದ್ದು, ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆದರೆ ಆಸ್ಪತ್ರೆಯ ಆಡಳಿತ ಮಂಡಳಿಯು ತಾವು ಕೋರಿರುವ ಅಧಿಕೃತ ವೈದ್ಯಕೀಯ ವರದಿಗಳನ್ನು ನೀಡಲು ನಿರಾಕರಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಅವರು ತಿಳಿಸಿದ್ದಾರೆ.
​ಆಸ್ಪತ್ರೆಯ ಮೂಲಗಳ ಪ್ರಕಾರ ವಾಂಗ್ಚುಕ್ ಅವರ ದೇಹದಲ್ಲಿ ಪೊಟಾಷಿಯಂ ಮಟ್ಟವು ಶೇಕಡಾ 2.9 ಕ್ಕೆ ಕುಸಿಯುತ್ತಿದೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚಿನ ಪಾರದರ್ಶಕತೆಗಾಗಿ ತಮ್ಮ ಕುಟುಂಬದ ವತಿಯಿಂದ ಹೊರಗಿನ ಖಾಸಗಿ ಪ್ರಯೋಗಾಲಯವೊಂದರಲ್ಲಿ ಸ್ವತಂತ್ರವಾಗಿ ಮರುಪರೀಕ್ಷೆ ಮಾಡಿಸಲು ತೀರ್ಮಾನಿಸಲಾಗಿದೆ ಎಂದು ಗೀತಾಂಜಲಿ ಜೆ. ಆ್ಯಂಗ್ಮೊ ಅವರು ಮಾಧ್ಯಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ನ್ಯಾಯಸಮ್ಮತ ಹೋರಾಟಕ್ಕೆ ದೆಹಲಿ ಆಡಳಿತವು ಅಡ್ಡಿಪಡಿಸದೆ, ಹೋರಾಟಗಾರರ ಹಕ್ಕುಗಳನ್ನು ಗೌರವಿಸಬೇಕೆಂದು ಅವರು ಈ ಸಂದರ್ಭದಲ್ಲಿ ಮತ್ತೊಮ್ಮೆ ಮನವಿ ಮಾಡಿದ್ದಾರೆ

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft