
ಉತ್ತರ ಪ್ರದೇಶದ ಮೀರತ್‌ನಲ್ಲಿ ಇಬ್ಬರು ಮುಸ್ಲಿಂ ಯುವಕರನ್ನು ಸುಳ್ಳು ಅಪಹರಣ ಪ್ರಕರಣದಲ್ಲಿ ಸಿಲುಕಿಸಲು ಸಂಘ ಪರಿವಾರದ ಮುಖಂಡನೊಬ್ಬ ವ್ಯವಸ್ಥಿತ ಸಂಚು ರೂಪಿಸಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯು ಸಾರ್ವಜನಿಕವಾಗಿ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸರ ವರದಿಯ ಪ್ರಕಾರ, ನಕುಲ್ ಸಿಂಗ್ ಎಂಬಾತ ಜೀಶನ್ ಮತ್ತು ಶವೇಜ್ ಎಂಬ ಇಬ್ಬರು ಯುವಕರ ವಿರುದ್ಧ ಹಿಂದೂ ಮಹಿಳೆಯೊಬ್ಬಳನ್ನು ಅಪಹರಿಸಿದ್ದಾರೆ ಎಂದು ಸುಳ್ಳು ದೂರು ನೀಡಿದ್ದನು. ಈ ಮಹಿಳೆಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕರೆತಂದ ನಕುಲ್, ಉದ್ದೇಶಪೂರ್ವಕವಾಗಿ ಆಕೆಯನ್ನು ಯುವಕರ ಕಾರಿನಲ್ಲಿ ಕಳುಹಿಸಿದ್ದನು ಮತ್ತು ಬಳಿಕ ಸುಳ್ಳು ಮಾಹಿತಿ ನೀಡಿ ಪೊಲೀಸರಿಗೆ ದೂರು ನೀಡಿದ್ದನು.
ಮಹಿಳೆಯು ಪ್ರಜ್ಞೆಗೆ ಮರಳಿದ ನಂತರ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ, ನಕುಲ್ ಸಿಂಗ್ ತನ್ನನ್ನು ಇಬ್ಬರು ಯುವಕರೊಂದಿಗೆ ಕಳುಹಿಸಲು ವ್ಯವಸ್ಥೆ ಮಾಡಿದ್ದನು ಮತ್ತು ಈ ಕಾರ್ಯಕ್ಕೆ ಹಣ ನೀಡುವ ಭರವಸೆ ನೀಡಿದ್ದನು ಎಂದು ಸ್ಪಷ್ಟಪಡಿಸಿದ್ದಾಳೆ. ಈ ಹೇಳಿಕೆಯನ್ನು ಪೊಲೀಸರು 500ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಮತ್ತು ಕರೆ ವಿವರಗಳ ವಿಶ್ಲೇಷಣೆಯ ಮೂಲಕ ದೃಢಪಡಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ನಕುಲ್ ಸಿಂಗ್ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸಲು ಮೀರತ್ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಜೀಶನ್ ಮತ್ತು ಶವೇಜ್ ನಿರಪರಾಧಿಗಳೆಂದು ತನಿಖೆಯಿಂದ ಸಾಬೀತಾಗಿದ್ದು, ಸುಳ್ಳು ಆರೋಪ ಹೊರಿಸಿದ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ವಲಯದಲ್ಲಿ ಆಗ್ರಹ ವ್ಯಕ್ತವಾಗಿದೆ



