
2 ಜೂನ್ 2026: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 12ನೇ ತರಗತಿಯ ಮೌಲ್ಯಮಾಪನಕ್ಕಾಗಿ ಜಾರಿಗೆ ತಂದಿರುವ ಆನ್-ಸ್ಕ್ರೀನ್ ಮಾರ್ಕಿಂಗ್ (OSM) ವ್ಯವಸ್ಥೆಯ ಸುತ್ತಲಿನ ವಿವಾದವು ತೀವ್ರಗೊಂಡಿದೆ. ಈ ತಂತ್ರಜ್ಞಾನ ಆಧಾರಿತ ಮೌಲ್ಯಮಾಪನ ಪದ್ಧತಿಯಲ್ಲಿ ಎದುರಾಗಿರುವ ಗಂಭೀರ ದೋಷಗಳು ಹಾಗೂ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ, ಶಿಕ್ಷಣ ಇಲಾಖೆಯ ಸಂಸದೀಯ ಸ್ಥಾಯೀ ಸಮಿತಿಯು ಉನ್ನತ ಮಟ್ಟದ ಪರಿಶೀಲನೆಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ ಸಂಜಯ್ ಕುಮಾರ್ ಹಾಗೂ ಸಿಬಿಎಸ್ಇ ಮುಖ್ಯಸ್ಥ ರಾಹುಲ್ ಸಿಂಗ್ ಅವರಿಗೆ ಸಮಿತಿಯ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.
ಕಾಂಗ್ರೆಸ್ ಹಿರಿಯ ನಾಯಕ ದಿಗ್ದಿಜಯ್ ಸಿಂಗ್ ನೇತೃತ್ವದ ಶಿಕ್ಷಣ, ಮಹಿಳಾ, ಮಕ್ಕಳ, ಯುವಜನ ಮತ್ತು ಕ್ರೀಡಾ ವ್ಯವಹಾರಗಳ ಸಂಸದೀಯ ಸ್ಥಾಯೀ ಸಮಿತಿಯು ಈ ಮಹತ್ವದ ಸಭೆಯನ್ನು ಕರೆದಿದೆ. ಇತ್ತೀಚೆಗೆ ಪ್ರಕಟವಾದ 12ನೇ ತರಗತಿಯ ಫಲಿತಾಂಶದ ನಂತರದ ಪರಿಶೀಲನೆ ಹಾಗೂ ಮರು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ವ್ಯಾಪಕ ತಾಂತ್ರಿಕ ತೊಂದರೆಗಳನ್ನು ಎದುರಿಸಿದ್ದಾರೆ. ವೆಬ್ಸೈಟ್ ಕ್ರ್ಯಾಶ್, ಪೇಮೆಂಟ್ ಫೇಲ್ಯೂರ್ ಮತ್ತು ಉತ್ತರ ಪತ್ರಿಕೆಗಳ ಅಪ್ಲೋಡ್ನಲ್ಲಿನ ಲೋಪಗಳ ಕುರಿತು ಬಂದಿರುವ ದೂರುಗಳ ಬಗ್ಗೆ ಅಧಿಕಾರಿಗಳಿಂದ ಸಮಿತಿಯು ವಿವರಣೆಯನ್ನು ಕೋರಲಿದೆ.
ಈ ಪ್ರಮುಖ ಸಭೆಯಲ್ಲಿ ಸಿಬಿಎಸ್ಇ ವಿದ್ಯಾರ್ಥಿಗಳ ಪ್ರತಿನಿಧಿಗಳು ಸಹ ಭಾಗವಹಿಸಲಿದ್ದು, ತಾವು ಅನುಭವಿಸಿದ ತೊಂದರೆಗಳ ಬಗ್ಗೆ ನೇರವಾಗಿ ಸಮಿತಿಗೆ ಸಾಕ್ಷ್ಯ ನುಡಿಯಲಿದ್ದಾರೆ. ಇದರೊಂದಿಗೆ, ವ್ಯವಸ್ಥೆಯ ತಾಂತ್ರಿಕ ಸುರಕ್ಷತೆ ಹಾಗೂ ಸೈಬರ್ ಭದ್ರತೆಯ ಆಯಾಮಗಳನ್ನು ಪರಿಶೀಲಿಸಲು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡದ (CERT-In) ಮಹಾನಿರ್ದೇಶಕರಿಗೂ ಸಮನ್ಸ್ ಜಾರಿ ಮಾಡಲಾಗಿದೆ. ಐಐಟಿ ಮದ್ರಾಸ್ ಮತ್ತು ಐಐಟಿ ಕಾನ್ಪುರದ ನಾಲ್ಕು ಸದಸ್ಯರ ತಜ್ಞರ ತಂಡವು ಈಗಾಗಲೇ ಈ ತಾಂತ್ರಿಕ ದೋಷಗಳ ಮೂಲ ಕಾರಣವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದೆ.
ಇದೇ ಸಭೆಯಲ್ಲಿ 9 ಮತ್ತು 10ನೇ ತರಗತಿಗಳಲ್ಲಿ ಮೂರು ಭಾಷೆಗಳ ಸೂತ್ರವನ್ನು (Three-language formula) ಜಾರಿಗೊಳಿಸುವ ಪ್ರಕ್ರಿಯೆಯ ಕುರಿತಾಗಿಯೂ ಚರ್ಚೆಗಳು ನಡೆಯಲಿವೆ. ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಗೆ ಪರಿವರ್ತನೆಯಾಗುವಾಗ ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ಹೇಗೆ ರಕ್ಷಿಸಲಾಗಿದೆ ಮತ್ತು ಭವಿಷ್ಯದಲ್ಲಿ ಇಂತಹ ಲೋಪಗಳು ಮರುಕಳಿಸದಂತೆ ಕೈಗೊಳ್ಳಬೇಕಾದ ಪಾರದರ್ಶಕ ಕ್ರಮಗಳ ಕುರಿತು ಸಂಸದೀಯ ಸಮಿತಿಯು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡುವ ನಿರೀಕ್ಷೆಯಿದೆ.



