ರಾಜ್ಯದ ಮತದಾರರ ಪಟ್ಟಿ ಅಕ್ರಮಗಳ ವಿರುದ್ಧ ಕಾಂಗ್ರೆಸ್ ಹೋರಾಟ ಮುಂದುವರಿಯಲಿದೆ. ಚುನಾವಣಾ ಆಯೋಗವು ಅಗತ್ಯವಿದ್ದರೆ ವರುಣಾ ಮತ್ತು ಚಾಮರಾಜಪೇಟೆ ಕ್ಷೇತ್ರಗಳಲ್ಲಿಯೂ ತನಿಖೆ ನಡೆಸಲಿ ಎಂದು ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ. ಚಿಲುಮೆ ಸಂಸ್ಥೆಯ ಮೂಲಕ ಬಿಜೆಪಿ ಅಕ್ರಮ ಎಸಗಿದೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು (ಆ.08): ರಾಜ್ಯದಲ್ಲಿ ನಡೆದ ಮತದಾರರ ಪಟ್ಟಿ ಅಕ್ರಮಗಳ ವಿರುದ್ಧ ಕಾಂಗ್ರೆಸ್ ಪಕ್ಷದ ಹೋರಾಟ ಮುಂದುವರಿಯಲಿದೆ. ಯಾವುದೇ ಕ್ಷೇತ್ರದಲ್ಲಿ ಡಬಲ್ ಎಂಟ್ರಿ ಆಗಿದ್ದರೂ ಅದು ತಪ್ಪು. ವರುಣಾ, ಚಾಮರಾಜಪೇಟೆ ಸೇರಿದಂತೆ ಯಾವುದೇ ಕ್ಷೇತ್ರದ ಬಗ್ಗೆ ತನಿಖೆಯಾಗಲಿ, ಅದನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಚುನಾವಣಾ ಆಯೋಗದ ಮುಖ್ಯ ಅಧಿಕಾರಿಯನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯದಲ್ಲಿ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ನಾನು ಇಂದು ಮುಖ್ಯ ಚುನಾವಣಾಧಿಕಾರಿಗಳನ್ನು ಭೇಟಿ ಮಾಡಿದ್ದೇನೆ. ಮತದಾರರ ಪಟ್ಟಿಯಲ್ಲಿ ನಡೆದ ಅನ್ಯಾಯದ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ಕಾಂಗ್ರೆಸ್ ಪಕ್ಷದ ಪರವಾಗಿ ಬಂದವರಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಮಹಾದೇವಪುರ ಕ್ಷೇತ್ರದಲ್ಲಿ ನಡೆದ ಅಕ್ರಮಗಳ ಬಗ್ಗೆ ಇಂದು ದಾಖಲೆಗಳನ್ನು ನೀಡಿಲ್ಲ. ಆದರೆ, ಎಲ್ಲೆಲ್ಲಿ ಅಕ್ರಮಗಳ ನಡೆದಿವೆಯೋ ಅಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ‘ನಂತರ ನಾವು ವಿವರಗಳನ್ನು ತಂದುಕೊಡುತ್ತೇವೆ. ಇದು ನಮ್ಮ ರಾಜ್ಯದಷ್ಟೇ ಹೋರಾಟವಲ್ಲ, ಈ ನಿಟ್ಟಿನಲ್ಲಿ ಹೋರಾಟ ಮುಂದುವರಿಯಲಿದೆ’ ಎಂದು ತಿಳಿಸಿದರು.




