ಬೆಂಗಳೂರು: ಮುಂಬರುವ ಏಷ್ಯಾಕಪ್ ಟೂರ್ನಿಯಿಂದ ಪ್ರತಿಭಾನ್ವಿತ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ಕೈಬಿಡಲಾಗಿದೆ. ಇದರ ಬೆನ್ನಲ್ಲೇ ಅಯ್ಯರ್‌ಗೆ ಗುಡ್ ನ್ಯೂಸ್ ನೀಡಲು ಬಿಸಿಸಿಐ ಮುಂದಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಸೆಪ್ಟೆಂಬರ್ 09ರಿಂದ ಆರಂಭವಾಗಲಿರುವ ಏಷ್ಯಾಕಪ್ ಟೂರ್ನಿಗೆ ಈಗಾಗಲೇ ಭಾರತ ತಂಡ ಪ್ರಕಟವಾಗಿದ್ದು, ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕಳೆದೊಂದು ವರ್ಷದಲ್ಲಿ ಶ್ರೇಯಸ್ ಅಯ್ಯರ್ ಟಿ20 ಮಾದರಿಯಲ್ಲಿ ಅದ್ಭುತ ಲಯದಲ್ಲಿದ್ದಾರೆ. 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅಯ್ಯರ್, ಪಂಜಾಬ್ ಕಿಂಗ್ಸ್ ಪರ 600+ ರನ್ ಬಾರಿಸುವುದರ ಜತೆಗೆ ಪಂಜಾಬ್ ಕಿಂಗ್ಸ್ ತಂಡವನ್ನು ನಾಯಕನಾಗಿ ಫೈನಲ್‌ಗೇರಿಸಿದ್ದರು.

ಇದೆಲ್ಲದರ ಹೊರತಾಗಿಯೂ ಶ್ರೇಯಸ್ ಅಯ್ಯರ್ ಅವರನ್ನು ಏಷ್ಯಾಕಪ್ ಟೂರ್ನಿಗೆ ಭಾರತ ತಂಡದಿಂದ ಹೊರಗಿಡಲಾಗಿದೆ. ಆದರೆ ಇದೀಗ ಬಿಸಿಸಿಐ ಶ್ರೇಯಸ್ ಅಯ್ಯರ್‌ಗೆ ಮಹತ್ವದ ಜವಾಬ್ದಾರಿ ನೀಡಲು ಮುಂದಾಗಿದೆ.
ಸದ್ಯ ಭಾರತ ತಂಡದಲ್ಲಿ ವಿವಿಧ ಮಾದರಿಯ ಕ್ರಿಕೆಟ್‌ಗೆ ಬೇರೆ ಬೇರೆ ನಾಯಕರಿದ್ದಾರೆ. ಟೆಸ್ಟ್ ಕ್ರಿಕೆಟ್‌ಗೆ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿರುವುದರಿಂದ ಶುಭ್‌ಮನ್ ಗಿಲ್ ಭಾರತ ಟೆಸ್ಟ್ ತಂಡದ ನಾಯಕರಾಗಿ ನೇಮಕವಾಗಿದ್ದಾರೆ.
ಇನ್ನು ಕಳೆದ ವರ್ಷ ಐಸಿಸಿ ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದಾದ ಬಳಿಕ ಭಾರತ ಟಿ20 ತಂಡಕ್ಕೆ ಸೂರ್ಯಕುಮಾರ್ ಯಾದವ್ ನಾಯಕರಾಗಿದ್ದಾರೆ. ಸದ್ಯ ಏಷ್ಯಾಕಪ್ ಟೂರ್ನಿಗೆ ಗಿಲ್ ಉಪನಾಯಕರಾಗಿ ನೇಮಕವಾಗಿದ್ದಾರೆ
ಸದ್ಯ ರೋಹಿತ್ ಶರ್ಮಾ ಭಾರತ ಏಕದಿನ ತಂಡದ ನಾಯಕರಾಗಿ ಮುಂದುವರೆದಿದ್ದಾರೆ. ಇದೀಗ ದೈನಿಕ್ ಜಾಗರಣ್ ವರದಿಯ ಪ್ರಕಾರ ಭಾರತ ಏಕದಿನ ಮಾದರಿಯ ಕ್ರಿಕೆಟ್‌ಗೆ ಶುಭ್‌ಮನ್ ಗಿಲ್ ಬದಲು ಶ್ರೇಯಸ್ ಅಯ್ಯರ್‌ಗೆ ನಾಯಕತ್ವ ಪಟ್ಟಕಟ್ಟಲು ಮುಂದಾಗಿದೆ ಎಂದು ವರದಿಯಾಗಿದೆ
2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ 243 ರನ್ ಬಾರಿಸುವ ಮೂಲಕ ಭಾರತ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದರು. ಅಯ್ಯರ್ ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ನಂಬಿಗಸ್ಥ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ.
ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್ ಆಡುವ ಗುರಿ ಹೊಂದಿದ್ದಾರೆ, ಒಂದು ವೇಳೆ ಅದಕ್ಕೂ ಮೊದಲೇ ರೋಹಿತ್ ಶರ್ಮಾ ವಯಸ್ಸಿನ ಕಾರಣದಿಂದ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರೆ, ಶ್ರೇಯಸ್ ಅಯ್ಯರ್‌ಗೆ ನಾಯಕತ್ವ ಪಟ್ಟ ಕಟ್ಟುವ ಲೆಕ್ಕಾಚಾರ ಬಿಸಿಸಿಐ ಮುಂದಿದೆ ಎಂದು ವರದಿಯಾಗಿದೆ




