
ಬೆಂಗಳೂರು, (ಆಗಸ್ಟ್ 22): ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಆರಂಭಕ್ಕೆ ದಿನಗಣನೆಗಳು ಶುರುವಾಗಿವೆ. 2025ರ ದಸರಾ ಚಟುವಟಿಗಳ ಸಿದ್ದತೆ ಈಗಾಗಲೇ ಆರಂಭಗೊಂಡಿದ್ದು, ದಸರಾಗೆ ಸೆಪ್ಟೆಂಬರ್ 22ರಂದು ಚಾಲನೆ ಸಿಗಲಿದೆ. ಇನ್ನು ಈ ಬಾರಿ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತೆ ಕನ್ನಡದ ಲೇಖಕಿ ಬಾನು ಮುಷ್ತಾಕ್ (Banu Mushtaq) ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಂದು (ಆಗಸ್ಟ್ 22) ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಇಂದು (ಆಗಸ್ಟ್ 22) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ದಸರಾ ಮಹೋತ್ಸವ ಉದ್ಘಾಟನೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್ ಅವರು ಉದ್ಘಾಟಿಸಲಿದ್ದಾರೆ. ಅವರ ಹೃದಯ ದೀಪ ಕೃತಿಗೆ ಬೂಕರ್ ಪ್ರಶಸ್ತಿ ಸಿಕ್ಕಿದ್ದು, ಕರ್ನಾಟಕದ ಮಹಿಳೆಗೆ ಬೂಕರ್ ಪ್ರಶಸ್ತಿ ಸಿಕ್ಕಿದ್ದು ಬಹಳ ಸಂತೋಷ ಆಗಿದೆ. ಹೋರಾಟದ ಹಿನ್ನೆಲೆಯಿಂದ ಬಂದವರು ಬಾನು ಮುಷ್ತಾಕ್. ರೈತ ಮತ್ತು ಕನ್ನಡ ಚಳವಳಿಯಲ್ಲಿ ಕೆಲಸ ಮಾಡಿದ್ದಾರೆ. ಹೀಗಾಗಿ ಮಹಿಳೆಯನ್ನ ದಸರಾ ಮಹೋತ್ಸವ ಉದ್ಘಾಟನೆಗೆ ಆಹ್ವಾನ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಈ ಮೊದಲು ಈ ಭಾರಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರನ್ನು ಈ ಬಾರಿಯ ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆ ಮಾಡಲಾಗಿತ್ತು ಎನ್ನುವ ಸುದ್ದಿ ಹರಿದಾಡಿದ್ದವು. ಆದ್ರೆ, ಇದಕ್ಕೆ ಸಿಎಂ ಕಚೇರಿ ಪ್ರತಿಕ್ರಿಯಿಸಿ ಅದು ಸುಳ್ಳು. ಆ ರೀತಿಯ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟನೆ ನೀಡಿದೆ. ಇದರ ಬೆನ್ನಲ್ಲೇ ಇದೀಗ ಸಿಎಂ ಸಿದ್ದದರಾಮಯ್ಯನವರು ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರನ್ನ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದ್ದಾರೆ.
ಬಾನು ಮುಷ್ತಾಕ್ ಬಗ್ಗೆ
ಕನ್ನಡದ ಲೇಖಕಿ, ಭಾನು ಮುಷ್ತಾಕ್ ಅವರಿಗೆ ಈ ಬಾರಿಯ ಪ್ರತಿಷ್ಠಿತ ಇಂಟರ್ ನ್ಯಾಷನಲ್ ಬೂಕರ್ ಪ್ರಶಸ್ತಿ ಬಂದಿದ್ದು ಕನ್ನಡಿಗರಿಗೆ ಇದು ಹೆಮ್ಮೆಯ ವಿಚಾರ. ಇದರೊಂದಿಗೆ ಕರ್ನಾಟಕಕ್ಕೆ ಹೆಸರು ತಂದಿದ್ದಾರೆ. ಇನ್ನು ಬಾನು ಮುಷ್ತಾಕ್ ಅವರು 1954 ಏಪ್ರಿಲ್ 03 ರಂದು ಹಾಸನ ಜಿಲ್ಲೆಯ ವಲಭಬಾಯಿಯಲ್ಲಿ ಜನಿಸಿದ್ದು, 8ನೇ ವಯಸ್ಸಿನಲ್ಲಿ ಮುಷ್ತಾಕ್ ಅವರನ್ನು ಶಿವಮೊಗ್ಗದಲ್ಲಿರುವ ಕನ್ನಡ ಭಾಷೆಯ ಮಿಷನರಿ ಶಾಲೆಗೆ ಸೇರಿಸಲಾಯಿತು. ಕನ್ನಡ ಬಾರದ ಅವರು ಪಟ್ಟು ಹಿಡಿದು ಆರು ತಿಂಗಳಲ್ಲಿ ಓದಲು ಮತ್ತು ಬರೆಯಲು ಕಲಿತರು. ಆನಂತರ ಬಿಎಸ್ಸಿ, ಎಲ್‌ಎಲ್‌ಬಿ ಪೂರ್ಣಗೊಳಿಸಿದರು. ಉದ್ಯೋಗಕ್ಕಾಗಿ ಹರಿಸಿ ಲಂಕೇಶ್ ಪತ್ರಿಕೆಯಲ್ಲಿ ಜಿಲ್ಲಾ ವರದಿಗಾರರಗಾಗಿ ಸೇರಿದ ಅವರು, 9 ವರ್ಷ ತಮ್ಮ ಸೇವೆ ಸಲ್ಲಿಸಿದ್ದರು.
ಬೂಕರ್ ಪ್ರಶಸ್ತಿಗೆ ಭಾಜನರಾದ ಮೊದಲ ಕನ್ನಡತಿ
ಕನ್ನಡದ ಹೆಸರಾಂತ ಸಾಹಿತಿ ಬಾನು ಮುಷ್ತಾಕ್ ಅವರು ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು ಸಿರಿಗನ್ನಡದ ಸಾಹಿತ್ಯಕ್ಕೆ ದೊರೆತ ಮೊದಲ ಪ್ರಶಸ್ತಿ ಇದಾಗಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಾಹಿತ್ಯಕ್ಕೆ ಮನ್ನಣೆ ಸಿಕ್ಕಂತಾಗಿದೆ.
ಇನ್ನು ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅಪಾರ. ಹೀಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ದಕ್ಕಿವೆ. ಕುಬ, ಬಡವರ ಮಗಳು ಹೆಣ್ಣಲ್ಲ ಕಾದಂಬರಿ, ಹೆಜ್ಜೆ ಮೂಡಿದ ಹಾದಿ, ಬೆಂಕಿಮಳೆ, ಎದೆಯ ಹಣತೆ ಅವರು ಬರೆದ ಕಥಾಸಂಕಲನವಾಗಿದೆ.




